ಬ್ಯಾರಿ ಸಾಹಿತಿ/ಕಲಾವಿದರ ಮಾಸಾಶನಕ್ಕೆ ಅರ್ಜಿ ಆಹ್ವಾನ

Update: 2020-06-02 16:34 GMT

ಮಂಗಳೂರು, ಜೂ.2: ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಸಾಹಿತ್ಯ, ದಫ್, ಬುರ್ದಾ, ಗಾಯನ, ನಾಟಕ, ಸಿನೆಮಾ, ಕೋಲ್ಕಲಿ, ಒಪ್ಪನೆ, ಕೈಕೊಟ್‌ಪಾಟ್, ತಾಲೀಮು ಮುಂತಾದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಕಲಾವಿದ ಮಾಸಿಕ 2,000 ರೂ.ನಂತೆ ಮಾಸಾಶನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.

ಅರ್ಹ ಕಲಾವಿದರು ಮತ್ತು ಸಾಹಿತಿಗಳು ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ತುಳುಭವನ, ಉರ್ವಾಸ್ಟೋರ್, ಆಶೋಕ ನಗರ ಅಂಚೆ, ಮಂಗಳೂರು ಕಚೇರಿಯಿಂದ ನಿಗದಿತ ನಮೂನೆಯ ಅರ್ಜಿಯನ್ನು ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿ ನೀಡಬೇಕು ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಸಲ್ಲಿಸಬೇಕಾದ ದಾಖಲೆಗಳು/ಪಾಲಿಸಬೇಕಾದ ಸೂಚನೆಗಳು

*ಅರ್ಜಿದಾರರು ಸಂಬಂಧಿತ ಕ್ಷೇತ್ರದಲ್ಲಿ 25 ವರ್ಷಗಳ ಕಾಲ ಸೇವೆ ಸಲ್ಲಿಸಿರಬೇಕು.
*ಕನಿಷ್ಠ 58 ವರ್ಷ ಪ್ರಾಯದವರಾಗಿಬೇಕು. ವಿಕಲಾಂಗರಾಗಿದ್ದಲ್ಲಿ ಕನಿಷ್ಠ 40 ವರ್ಷದವರಾಗಿಬೇಕು. ವಯಸ್ಸಿನ ಬಗ್ಗೆ ಶಿಕ್ಷಣ ಸಂಸ್ಥೆ ನೀಡಿದ ದಾಖಲೆ ಸಲ್ಲಿಸಬೇಕು. ಅಂದರೆ ಶಾಲಾ ದಾಖಲಾತಿ ಪ್ರಮಾಣ ಪತ್ರ/ಶಾಲಾ ವರ್ಗಾವಣಾ ಪತ್ರ ಅಥವಾ ಅಂಕಪಟ್ಟಿಯ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು. ಒಂದು ವೇಳೆ ವಯಸ್ಸಿನ ಬಗ್ಗೆ ಈ ದಾಖಲೆಗಳು ಇಲ್ಲದಿದ್ದಲ್ಲಿ ನ್ಯಾಯಾಲಯದ ಡಿಕ್ರಿ ಆದೇಶದ ಮೂಲಕ ಪಡೆದ ಜನನ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
*ತಹಶೀಲ್ದಾರ್‌ರಿಂದ ಪಡೆದ ವಾರ್ಷಿಕ ಆದಾಯ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. (ಗ್ರಾಮಾಂತರ ಪ್ರದೇಶಗಳಿಗೆ ರೂ. 40,000 ಹಾಗೂ ಪಟ್ಟಣ ಪ್ರದೇಶಗಳಿಗೆ ರೂ. 50,000 ಗರಿಷ್ಠ ಆದಾಯ ಮಿತಿಗೆ ಒಳಪಟ್ಟಂತೆ ಆದಾಯ ಹೊಂದಿರಬೇಕು)
*ವಿಕಲಾಂಗ ಕಲಾವಿದರಿಗೆ ವಯಸ್ಸು 40 ವರ್ಷಗಳಾಗಿದ್ದರೆ ಅಥವಾ 20 ವರ್ಷಗಳಿಂದ ಸೇವೆ ಸಲ್ಲಿಸಿದ್ದರೆ ಮಸಾಶಾನ ಮಂಜೂರಾತಿಗೆ ಅರ್ಜಿಯನ್ನು ಪರಿಗಣಿಸಲಾಗುವುದು. ದೈಹಿಕ ವಿಕಲಾಂಗತೆಯ ಬಗ್ಗೆ ಅಧಿಕೃತ ವೈದ್ಯಕೀಯ ದಾಖಲೆಗಳನ್ನು ಸಲ್ಲಿಸಬೇಕು.
*ಈಗಾಗಲೇ ರಾಜ್ಯ ಅಥವಾ ಕೇಂದ್ರ ಸರಕಾರದ ವಿವಿಧ ಯೋಜನೆಗಳಡಿ ಮಾಸಾಶನ ಪಡೆಯುತ್ತಿದ್ದಲ್ಲಿ ಅರ್ಜಿಯನ್ನು ಸಲ್ಲಿಸುವಂತಿಲ್ಲ.
*ಮಾಸಾಶನಕ್ಕೆ ಅರ್ಜಿ ಸಲ್ಲಿಸಲು ಬಯಸುವ ಸಾಹಿತಿ/ಕಲಾವಿದರು ಆಯಾ ಜಿಲ್ಲೆಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಭರ್ತಿ ಮಾಡಿ ಜಿಲ್ಲಾ ಸಹಾಯಕ ನಿರ್ದೇಶಕರಿಗೆ ಸಲ್ಲಿಸಬೇಕು. ಜಿಲ್ಲಾ ಸಹಾಯಕ ನಿರ್ದೇಶಕರು ಮಾರ್ಗಸೂಚಿಯನುಸಾರ ಸೇವೆಯ ಬಗ್ಗೆ ಮೂಲ ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಿಸಿ, ಕಲಾವಿದರ ವಯಸ್ಸು, ವರಮಾನ, ಕ್ಷೇತ್ರ, ಕಲಾಸೇವೆ, ವಿವರಗಳನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಿ ಮೂಲ ಅರ್ಜಿಗಳ ಸಮೇತ ಸಂಬಂಧಿತ ಅಕಾಡಮಿಗಳಿಗೆ ಕಳುಹಿಸಬೇಕು.
*ಅರ್ಜಿದಾರರು ಎರಡು ಬಣ್ಣಗಳುಳ್ಳ ದ್ವಿಪ್ರತಿಯ ಮಾಸಾಶನ ಅರ್ಜಿಯನ್ನು ಇತ್ತೀಚಿನ ಭಾವಚಿತ್ರ, ಅಂಚೆ ವಿಳಾಸ ಮತ್ತು ಅಗತ್ಯ ದಾಖಲೆಗಳೊಂದಿಗೆ ಕಲಾಸೇವೆ ಮೂಲ ದಾಖಲೆ ಅಥವಾ (ಗೆಜೆಟೆಡ್) ಪತ್ರಾಂಕಿತ ಅಧಿಕಾರಿಯಿಂದ ದೃಢೀಕೃತವಾದ ದಾಖಲೆಗಳೊಂದಿಗೆ ಸಹಿ ಮಾಡಿ ಲಗತ್ತಿಸಬೇಕು. ಭಾವಚಿತ್ರಗಳನ್ನು ಅರ್ಜಿಯ ಮೇಲೆ ಲಗತ್ತಿಸಿ ಭಾವಚಿತ್ರಗಳಿಗೆ ಪತ್ರಾಂಕಿತ ಅಧಿಕಾರಿಯಿಂದ ದೃಢೀಕರಣ ಪಡೆಯಬೇಕು.
 *ಕಲಾವಿದರು ಅನಕ್ಷರಸ್ಥರಾಗಿದ್ದು, ಸಹಿಯ ಬದಲು ಹೆಬ್ಬೆಟ್ಟು ಗುರುತು ನಮೂದಿಸಿದಲ್ಲಿ ಅವರ ಹೆಬ್ಬೆಟ್ಟಿನ ಗುರುತನ್ನು ಈ ‘ಹೆಬ್ಬೆಟ್ಟಿನ ಗುರುತು ... ಇವರದ್ದು’ ಎಂದು ಧೃಢೀಕರಿಸಬೇಕು.
*ಅರ್ಜಿದಾರರ ಆಧಾರ್ ಕಾರ್ಡ್ ಪ್ರತಿ ಸಲ್ಲಿಸಬೇಕು.
ಮಾಹಿತಿಗಾಗಿ ಬ್ಯಾರಿ ಸಾಹಿತ್ಯ ಅಕಾಡಮಿ, ಸಾಮರ್ಥ್ಯ ಸೌಧ, 2ನೇ ಮಹಡಿ, ಮಂಗಳೂರು ತಾಪಂ ಹಳೆ ಕಟ್ಟಡ, ಮಿನಿ ವಿಧಾನಸೌಧದ ಬಳಿ, ಮಂಗಳೂರು-575001 ಅಥವಾ ದೂ.ಸಂ: 0824-2412297/7483946578 ನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News