ಪ್ರತಿಭಟನೆ ಹಿನ್ನೆಲೆ: ಸೇನಾ ನಿಯೋಜನೆಗೆ ಆದೇಶ ನೀಡಿದ ಟ್ರಂಪ್

Update: 2020-06-02 16:46 GMT

ವಾಶಿಂಗ್ಟನ್, ಜೂ. 2: “ವಾಶಿಂಗ್ಟನ್‌ನಲ್ಲಿ ಇನ್ನಷ್ಟು ಪ್ರತಿಭಟನೆಗಳನ್ನು ತಡೆಯಲು ನಾನು ‘ಭಾರೀ ಶಸ್ತ್ರಸಜ್ಜಿತ’ ಸಾವಿರಾರು ಸೈನಿಕರು ಮತ್ತು ಪೊಲೀಸರನ್ನು ನಿಯೋಜಿಸುತ್ತಿದ್ದೇನೆ” ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.

ಜಾರ್ಜ್ ಫ್ಲಾಯ್ಡ್ ಸಾವನ್ನು ಪ್ರತಿಭಟಿಸಿ ಇಲ್ಲಿನ ಶ್ವೇತಭವನದ ಸಮೀಪ ನಡೆದ ಪ್ರತಿಭಟನೆಗಳ ವೇಳೆ, ಅದರ ಸಮೀಪದ ಕಟ್ಟಡಗಳು ಮತ್ತು ಸ್ಮಾರಕಗಳಿಗೆ ಪ್ರತಿಭಟನಕಾರರು ಹಾನಿ ಮಾಡಿದ ಬಳಿಕ ಟ್ರಂಪ್ ಈ ಹೇಳಿಕೆ ನೀಡಿದ್ದಾರೆ.

‘‘ನಿನ್ನೆ ರಾತ್ರಿ ನಗರದಲ್ಲಿ ನಡೆದಿರುವುದು ಸಂಪೂರ್ಣ ಅವಮಾನವಾಗಿದೆ’’ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

‘‘ಗಲಭೆ, ಲೂಟಿ, ವಿದ್ವಂಸಕ ಕೃತ್ಯಗಳು, ದಾಳಿಗಳು ಮತ್ತು ಸೊತ್ತು ನಾಶವನ್ನು ನಿಲ್ಲಿಸಲು ನಾನು ಸಾವಿರಾರು ಭಾರೀ ಶಸ್ತ್ರಸಜ್ಜಿತ ಸೈನಿಕರು, ಸೇನಾ ಸಿಬ್ಬಂದಿ ಮತ್ತು ಕಾನೂನು ಅನುಷ್ಠಾನ ಅಧಿಕಾರಿಗಳನ್ನು ಕಳುಹಿಸುತ್ತಿದ್ದೇನೆ’’ ಎಂದರು.

ಪೊಲೀಸರ ಬಂಧನದ ವೇಳೆ ಜಾರ್ಜ್ ಫ್ಲಾಯ್ಡ್ ಮೃತಪಟ್ಟಿರುವುದನ್ನು ಪ್ರತಿಭಟಿಸಿ ದೇಶವ್ಯಾಪಿ ಪ್ರತಿಭಟನೆಗಳು ನಡೆದಿರುವ ಹಿನ್ನೆಲೆಯಲ್ಲಿ, ‘ದೇಶಿ ಭಯೋತ್ಪಾದನೆಯ ಕೃತ್ಯ’ಗಳನ್ನು ಅವರು ಖಂಡಿಸಿದರು.

‘‘ಈ ಭಯೋತ್ಪಾದನೆಯ ಸಂಘಟಕರಿಗೆ ನೋಟಿಸ್ ನೀಡಬೇಕೆಂದು ನಾನು ಬಯಸುತ್ತೇನೆ. ನಿಮಗೆ ಕಠಿಣ ಕ್ರಿಮಿನಲ್ ದಂಡಗಳು ಹಾಗೂ ದೀರ್ಘಾವಧಿ ಜೈಲು ಶಿಕ್ಷೆಗಳು ಕಾದಿವೆ ಎಂದು ನಾನು ಹೇಳಬಯಸುತ್ತೇನೆ’’ ಎಂದು ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಅವರು ಹೇಳಿದರು.

ಶ್ವೇತಭವನದ ಹೊರಗೆ ಪ್ರತಿಭಟನಕಾರರು ಮತ್ತು ಪೊಲೀಸರ ನಡುವೆ ಬಿರುಸಿನ ಕಾಳಗ ನಡೆಯುತ್ತಿರುವಂತೆಯೇ ಅವರು ಈ ಮಾತುಗಳನ್ನು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News