ಮಂಗಳೂರಲ್ಲಿ ಭಾರತದ ಮೊದಲ ‘ಸರ್ವೆಲೊ ಪಿಎಕ್ಸ್ 2020’ ಸೈಕಲ್

Update: 2020-06-02 16:51 GMT

ಮಂಗಳೂರು, ಜೂ. 2: ವೃತ್ತಿಪರ ಸೈಕ್ಲಿಸ್ಟ್‌ಗಳ ಅಚ್ಚುಮೆಚ್ಚಿನ ಕೆನಡಿಯನ್ ಮೂಲದ ಕಂಪೆನಿಯ ಸೈಕಲ್ ಆದ ಸರ್ವೆಲೊ ಪಿಎಕ್ಸ್ ಸಿರೀಸ್ ಡ್ಯುರ-ಏಸ್ ಡಿಐ2- 2020 ಮಾದರಿಯದ್ದು. ಭಾರತದಲ್ಲೇ ಮೊದಲ ಬಾರಿಗೆ ಮಂಗಳೂರಿನ ಕಂಕನಾಡಿ ಬೈಪಾಸ್ ರಸ್ತೆಯ ತಾಜ್ ಸೈಕಲ್ ಮಳಿಗೆಯಲ್ಲಿ ಈ ನೂತನ ಸೈಕಲ್‌ನ್ನು ಪ್ರದರ್ಶನಕ್ಕೆ ಇಡಲಾಗಿದೆ.

ಸರ್ವೆಲೊ ಪಿಎಕ್ಸ್ ಸಿರೀಸ್‌ನಲ್ಲೇ ಇದು ಮೇಲ್ಪಂಕ್ತಿಯ ಅತ್ಯಾಧುನಿಕ ತಂತ್ರಜ್ಞಾನದಿಂದ ಆವಿಷ್ಕಾರಗೊಂಡಿದೆ. ನಿರ್ದಿಷ್ಟವಾಗಿ ಟ್ರಯಥ್ಲಾನ್ ಸ್ಪರ್ಧಿಗಳಿಗೆಂದೇ ಇದನ್ನು ತಯಾರಿಸಲಾಗಿದ್ದು, ಪ್ರಪಂಚದ ಮೂಲೆಮೂಲೆಯಲ್ಲೂ ಇದಕ್ಕೆ ಅನನ್ಯ ಬೇಡಿಕೆಯಿದೆ.

ಇದು ಹಗುರವಾದ ಮತ್ತು ಬಲಿಷ್ಠವಾದ ಸರ್ವೆಲೊ ಪಿಎಕ್ಸ್ ನೂತನ ಸರಣಿಯ ಸೈಕಲ್ ‌ಆಗಿದೆ. ಸುಧಾರಿತ ‘ಏರೋ’ ಪರೀಕ್ಷೆಯಿಂದ ತಯಾರಿಸಲಾದ ಈ ಯಂತ್ರವು ಸುಧಾರಿತ ಏರೋಡೈನಾಮಿಕ್ಸ್, ಅತ್ಯದ್ಭುತ ಕಾಕ್‌ಪಿಟ್ ಒಳಗೊಂಡಿದೆ. ಈ ಸೈಕಲ್ ಅತ್ಯಾಧುನಿಕ ಶಿಮಾನೊ ಡ್ಯುರಾ ಏಸ್ ಡಿಐ 2 ಸಾಫ್ಟ್‌ವೇರ್‌ನ ಡ್ರೈವ್ ಹೊಂದಿದೆ. ಇಲೆಕ್ಟ್ರಾನಿಕ್ ಗಿಯರ್ ಶಿಫ್ಟರ್‌ನ್ನು ಲ್ಯಾಪ್‌ಟಾಪ್ ಬಳಸಿಕೊಂಡೇ ಫಿಟ್‌ಅಪ್ ಮಾಡಬಹುದು.

ಸಾಮಾನ್ಯವಾಗಿ ಸೈಕಲ್‌ಗಳನ್ನು ಸ್ಟೀಲ್ ಲೋಹದಿಂದಲೇ ಉತ್ಪಾದಿಸಲಾಗುತ್ತದೆ. ಆದರೆ ಈ ಸೈಕಲ್‌ನ್ನು ಸಂಪೂರ್ಣವಾಗಿ ಕಾರ್ಬನ್ ಫೈಬರ್‌ನಿಂದ ತಯಾರಿಸಲಾಗಿದೆ. ಈ ಸೈಕಲ್‌ನ್ನು ನಿರ್ದಿಷ್ಟ ರೈಡರ್‌ಗೆ ತಕ್ಕಂತೆ ಸೆಟ್‌ಅಪ್ ಮಾಡಬಹುದು. ಆತನ ಎತ್ತರ, ತೂಕಕ್ಕೆ ಅನುಗುಣವಾಗಿ ಸೆಟ್‌ಅಪ್ ಮಾಡಲಾಗುತ್ತದೆ. ಜತೆಗೆ ಅಗತ್ಯಾನುಸಾರ ಹ್ಯಾಂಡಲ್ ಹಿಂದೆ ಮುಂದೆ ಸರಿಸುವ ಅವಕಾಶವೂ ಇದೆ.

ಆಧುನಿಕ ದಿನಮಾನಗಳಲ್ಲಿ ಹೆಚ್ಚಿನ ಜನತೆ ಫಿಟ್‌ನೆಸ್‌ಗಾಗಿ ಅತ್ಯಾಧುನಿಕ ಸೈಕಲ್‌ಗಳನ್ನು ಖರೀದಿಸುವ ಟ್ರೆಂಡ್ ಬೆಳೆಯುತ್ತಿದೆ. ಯುವ ಜನಾಂಗದ ಸೈಕ್ಲಿಸ್ಟ್‌ಗಳೇ ನೂತನ ಶೈಲಿಯ ಸೈಕಲ್‌ಗಳನ್ನು ಹೆಚ್ಚು ಇಷ್ಟ ಪಡುತ್ತಾರೆ. ಈ ಸೈಕಲ್‌ನ ಮಾರುಕಟ್ಟೆಯ ಬೆಲೆ ಕೇವಲ 12 ಲಕ್ಷ ರೂ. ಮಾತ್ರ ಎನ್ನುತ್ತಾರೆ ತಾಜ್ ಸೈಕಲ್ ಮಳಿಗೆಯ ಮಾಲಕ ಮುಬೀನ್.

ತಾಜ್ ಸೈಕಲ್ ಮಳಿಗೆಯು 1927ರಿಂದಲೇ ಕಾರ್ಯಾಚರಿಸುತ್ತಿದೆ. ನಾಲ್ಕು ಬ್ರಾಂಚ್‌ಗಳನ್ನು ಹೊಂದಿದ್ದು, ಹೊಯ್ಗೆಬಝಾರ್‌ನಲ್ಲಿ ಪ್ರಧಾನ ಕಚೇರಿ ಹೊಂದಿದೆ. ದಕ್ಷಿಣ ಕನ್ನಡ, ಉಡುಪಿ ಸಹಿತ ಐದಾರು ಜಿಲ್ಲೆಗಳಲ್ಲಿ ಗ್ರಾಹಕರ ಆಯ್ಕೆಗೆ ಅನುಗುಣವಾಗಿ ಸೈಕಲ್ ಸರಬರಾಜು ಮಾಡಲಾಗುತ್ತಿದೆ ಎಂದು ಮುಬೀನ್ ತಿಳಿಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News