ಗುರುಪುರ ಸಮೀಪದ ಏತಮೊಗರುವಿನಲ್ಲಿ ಲಕ್ಷಾಂತರ ರೂ. ತರಕಾರಿ ನಷ್ಟ

Update: 2020-06-02 17:43 GMT

ಗುರುಪುರ, ಜೂ.2: ಗುರುಪುರ ಸಮೀಪದ ಏತಮೊಗರುವಿನ ಸುಮಾರು 25 ಎಕರೆ ಜಮೀನಿನಲ್ಲಿ ನಾನಾ ಬಗೆಯ ತರಕಾರಿ ಬೆಳೆದ ಕಲ್ಕತ್ತಾ ಮೂಲದ ಜಾವೆದ್ ಅಲಿ ಮತ್ತವರ ಕುಟುಂಬ ಲಾಕ್‌ಡೌನ್‌ನಿಂದ ಸಂಪೂರ್ಣ ನಷ್ಟ ಅನುಭವಿಸಿದ್ದು, ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

ಕಳೆದ ಐದಾರು ವರ್ಷದಿಂದ ಬದನೆ, ಸೋರೆಕಾಯಿ ಬೂದುಕುಂಬಳಕಾಯಿ, ಸೌತೆ, ಆಗಲಕಾಯಿ, ಬೆಂಡೆಕಾಯಿ ಜೊತೆಗೆ ಕಲ್ಲಂಗಡಿ ಬೆಳೆಸುತ್ತಿ ರುವ ಜಾವೆದ್ ಅಲಿಗೆ ಈ ಬಾರಿ ಆಕಾಶವೇ ತಲೆ ಮೇಲೆ ಬಿದ್ದಂತಾಗಿದೆ. ಪ್ರತಿ ವರ್ಷವೂ ನಗರದ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದ ಇವರು, ಈ ಬಾರಿ ಕೊರೋನ-ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೀಡಾಗಿದ್ದಾರೆ.

ನಿರೀಕ್ಷೆಗೂ ಮೀರಿದ ತರಕಾರಿ ಉತ್ಪಾದನೆಯಾದರೂ ಕೂಡ ಸಾಗಾಟಕ್ಕೆ ವಾಹನ, ಗ್ರಾಹಕರು ಮತ್ತು ಸೂಕ್ತ ಮಾರುಕಟ್ಟೆಯೂ ಇಲ್ಲದೆ ಕಂಗಾಲಾಗಿದ್ದಾರೆ. ಹಾಗಾಗಿ ಕೊಳೆಯುವ ಬದಲು ಕಡಿಮೆ ಬೆಲೆಗೆ ಸ್ಥಳೀಯರಿಗೆ ಮಾರಾಟ ಮಾಡುತ್ತಿದ್ದಾರೆ. ಇದೀಗ ತರಕಾರಿ ಖರೀದಿಸು ವವರೂ ಇಲ್ಲದೆ ಮಾರಾಟಕ್ಕೂ ಅವಕಾಶವಿಲ್ಲದೆ ಏಳು ಎಕರೆ ಜಮೀನಿನಲ್ಲಿ ಬೆಳೆದ ಬದನೆ, 1 ಎಕರೆ ಜಮೀನಿನಲ್ಲಿ ಬೆಳೆದ ಆಗಲಕಾಯಿ ಹಾಗೂ ಸೋರೆಕಾಯಿ, ಬೂದುಕುಂಬಳ ಕೊಳೆತು ಭೂಮಿ ಪಾಲಾಗಿದೆ.

ಸರಕಾರದ ಯಾವುದೇ ನೆರವಿಲ್ಲದೆ, ಸ್ಥಳೀಯರ ಹಡೀಲು ಗದ್ದೆಗಳನ್ನು ಲೀಸ್‌ಗೆ ಪಡೆದು, ಫಲ್ಗುಣಿ ನದಿ ನೀರು ಬಳಸಿಕೊಂಡು ಕಳೆದ ಐದು ವರ್ಷಗಳಿಂದ ಜಾವೆದ್ ಅಲಿ ಮತ್ತವರ ಕುಟುಂಬದ ಸದಸ್ಯರು ಇಲ್ಲಿ ಕಷ್ಟಪಟ್ಟು ತರಕಾರಿ ಬೆಳೆಸುತ್ತಿದ್ದಾರೆ. ನಷ್ಟ ಅನುಭವಿಸಿದ ಬಳಿಕ ಸಾವಿರಾರು ಗಿಡಗಳನ್ನು ಕಿತ್ತು ತೆಗೆಯಲಾಗಿದೆ. ಎಲ್ಲೆಡೆ ಹಾಳಾದ ಬದನೆ ಬಿದ್ದು, ಹಸಿರು ಪ್ರದೇಶವೀಗ ಹಳದಿಮಯವಾಗಿದೆ.

ಕಳೆದ ಮೂರು ತಿಂಗಳಲ್ಲಿ ದೂರದ ಊರುಗಳಿಂದ ಬಂದಿರುವ ಸುಮಾರು 15 ಮಂದಿ ಕೃಷಿ ಕೂಲಿ ಕಾರ್ಮಿಕರಿಗೆ ತಿಂಗಳಿಗೆ 12,000 ರೂಪಾಯಿ ವೇತನ ನೀಡುತ್ತಿದ್ದ ನಾನು ಇದೀಗ ನಷ್ಟದಿಂದ ಸಂಪೂರ್ಣ ಸೋತು ಹೋಗಿದ್ದೇನೆ. ಮುಂದಿನ ತರಕಾರಿ ಸೀಸನ್ ಹೊತ್ತಿಗೆ ಇಲ್ಲಿ ತರಕಾರಿ ಬೆಳೆಯಬೇಕಿದ್ದರೆ, ಸರಕಾರದ ನೆರವು ಬೇಕಿದೆ. ಸ್ಥಳೀಯರಲ್ಲಿ ನನ್ನ ಅಳಲು ತೋಡಿಕೊಂಡಿದ್ದೇನೆ. ನಾನು ಹೊರ ರಾಜ್ಯದವನಾದರೂ ಇಲ್ಲಿನ ಮಣ್ಣು ನನ್ನ ಕೈ ಬಿಟ್ಟಿಲ್ಲ. ಮಂಗಳೂರಿನ ಮಾರುಕಟ್ಟೆಗೆ ದಿನನಿತ್ಯ ತರಕಾರಿ ಹಾಕುತ್ತಾ ಬಂದಿದ್ದೇನೆ. ಈಗ ಕೊರೋನ-ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವೆ. ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು, ಸರಕಾರದ ನೆರವಿನ ನಿರೀಕ್ಷೆಯಲ್ಲಿರುವೆ ಎಂದು ಜಾವೆದ್ ಅಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News