ಇಂಡಿಯನ್ ಸೋಶಿಯಲ್ ಫೋರಂ ಪ್ರಯತ್ನ: ತವರು ತಲುಪಿದ ಕಾಲು ಮುರಿತಕ್ಕೊಳಗಾದ ಅನಿವಾಸಿ ಕನ್ನಡಿಗ

Update: 2020-06-02 17:51 GMT

ದಮಾಮ್, ಜೂ.2: ಇಂಡಿಯನ್ ಸೋಶಿಯಲ್ ಫೋರಂನ ಪ್ರಯತ್ನದ ಫಲವಾಗಿ ಕಾಲು ಮುರಿತಕ್ಕೊಳಗಾಗಿದ್ದ ಬೆಂಗಳೂರು ಮೂಲದ ಅನಿವಾಸಿ ಕನ್ನಡಿಗರೊಬ್ಬರು ತವರೂರು ತಲುಪಿದ್ದಾರೆ.

ಸೌದಿ ಅರೇಬಿಯಾದ ರಿಯಾದ್‌ನ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಬೆಂಗಳೂರಿನ ಮೆಹ್‌ಬೂಬ್ ಸುಬ್‌ಹಾನಿ ಎಂಬವರು ರೂಮಲ್ಲಿರು ವಾಗ ಬಿದ್ದು ಎರಡೂ ಕಾಲು ಮುರಿತಕ್ಕೊಳಗಾಗಿದ್ದರು. ಸೂಕ್ತ ಚಿಕಿತ್ಸೆ ಮತ್ತು ಉಪಚಾರವಿಲ್ಲದೆ ತೀರಾ ಸಂಕಷ್ಟಕ್ಕೀಡಾಗಿದ್ದರು. ಈ ಬಗ್ಗೆ ಮಾಹಿತಿ ಪಡೆದುಕೊಂಡ ಸೌದಿ ಅರೇಬಿಯಾದ ಇಂಡಿಯನ್ ಸೋಶಿಯಲ್ ಫೋರಂ ನೆರವಿನ ಹಸ್ತ ನೀಡಿತು.

ಕೇವಲ ಮೂರು ತಿಂಗಳ ಹಿಂದೆಯಷ್ಟೇ ಸೌದಿ ಅರೇಬಿಯಾಗೆ ಬಂದಿದ್ದ ಮೆಹ್‌ಬೂಬ್ ಎರಡು ತಿಂಗಳ ಹಿಂದೆ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆರ್ಥಿಕ ನಷ್ಟವನ್ನು ನಿಯಂತ್ರಿಸುವ ಕ್ರಮದ ಭಾಗವಾಗಿ ಕಂಪೆನಿಯು ಅವರನ್ನು ಕೆಲಸದಿಂದ ತೆಗೆದು ಹಾಕಿತ್ತು. ಒಂದೆಡೆ ಕೆಲಸ ಕಳಕೊಂಡ ನೋವು ಇನ್ನೊಂದೆಡೆ ರೂಮಲ್ಲಿರುವಾಗ ಬಿದ್ದು ಗಾಯಗೊಂಡು ಜರ್ಜರಿತಗೊಂಡಿದ್ದ ಮೆಹ್‌ಬೂಬ್ ಸುಬ್‌ಹಾನಿ ಅವರನ್ನು ಸಂಪರ್ಕಿಸಿದ ಐಎಸ್‌ಎಫ್ ಮುಖಂಡರು ಊರಿಗೆ ಕಳುಹಿಸಿಕೊಡುವ ಭರವಸೆ ನೀಡಿದರು.

ಮೇ 20ರಂದು ತವರಿಗೆ ಮರಳಲು ರಾಯಭಾರಿ ಕಚೇರಿ ಅನುಮೋದನೆ ನೀಡಿತ್ತಿ. ಅಲ್ಲದೆ ಪ್ರಯಾಣದ ಟಿಕೆಟ್ ಕಾಯ್ದಿರಿಸಲಾಗಿದ್ದರೂ ಎಕ್ಸಿಟ್-ರಿ ಎಂಟ್ರಿ ಪತ್ರ ಸಿದ್ಧವಾಗದ ಕಾರಣದಿಂದ ಅವರ ಪ್ರಯಾಣವನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿತ್ತು. ನಂತರ ಎಕ್ಸಿಟ್ ರಿ ಎಂಟ್ರಿ ಪತ್ರವನ್ನು ಕಂಪೆನಿ ನೀಡಿದ್ದರೂ ಪ್ರಯಾಣಕ್ಕೆ ರಾಯಭಾರಿ ಕಚೇರಿಯ ಅನುಮೋದನೆ ಅಗತ್ಯವಿತ್ತು.

ಹಾಗಾಗಿ ಇಂಡಿಯನ್ ಸೋಶಿಯಲ್ ಫೋರಂ ಮುಖಂಡರು ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಮೆಹ್‌ಬೂಬ್ ಸುಬ್‌ಹಾನಿ ಅವರ ಪರಿಸ್ಥಿಯನ್ನು ಸಂಪೂರ್ಣ ವೈದ್ಯಕೀಯ ವರದಿಗಳೊಂದಿಗೆ ಮನವರಿಕೆ ಮಾಡಿ ಮೇ 31ರಂದು ರಿಯಾದ್‌ನಿಂದ ಹೈದರಾಬಾದ್ ವಿಮಾನ ನಿಲ್ದಾಣ ತಲುಪಿದ್ದಾರೆ. ಹಾಗೇ ಮೆಹ್‌ಬೂಬ್ ಸುಬ್‌ಹಾನಿ ಅವರನ್ನು ಹೈದರಾಬಾದ್‌ನ ಶಿಕ್ಷಣ ಸಂಸ್ಥೆಯೊಂದರಲ್ಲಿ ಕ್ವಾರಂಟೈನ್‌ ಗೊಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News