ಕಡಲಬ್ಬರ ಪ್ರದೇಶಗಳಿಗೆ ಸಚಿವ ಕೋಟ ಭೇಟಿ

Update: 2020-06-02 17:57 GMT

ಮಂಗಳೂರು, ಜೂ.2: ಉಳ್ಳಾಲದ ಸೋಮೇಶ್ವರ, ಉಚ್ಚಿಲ, ಬಟ್ಟಪ್ಪಾಡಿ, ಉಳ್ಳಾಲ ಮೊಗವೀರ ಪಟ್ನ, ಕೈಕೋ, ಹಿಲರಿಯ ನಗರ ಪ್ರದೇಶ ಗಳಲ್ಲಿ ಕಡಲಿನ ಅಬ್ಬರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಂಗಳವಾರ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಕಡಲಿನ ಅಬ್ಬರ, ತೀವ್ರತೆ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಸರಕಾರದಿಂದ ಯಾವ ಯಾವ ಕಾರ್ಯ ರೂಪಿಸಬೇಕು ಎಂಬುದರ ಕುರಿತು ಜಿಲ್ಲಾಧಿಕಾರಿ ಮತ್ತು ಬಂದರು ಇಲಾಖೆ ಎ.ಡಿ.ಬಿ ಅಧಿಕಾರಿಗಳೊಂದಿಗೆ ಸಭೆ ನಡೆಸ ಲಾಗುತ್ತದೆ. ತಡೆಗೋಡೆ ನಿರ್ಮಿಸುವುದು ಮತ್ತು ತುರ್ತಾಗಿ ಯಾವ ಕಾರ್ಯ ಮಾಡಬೇಕು ಎಂಬುದರ ಬಗ್ಗೆ ನಿರ್ಧರಿಸಲಾಗುವುದು ಎಂದರು.

ಸ್ವಾಭಾವಿಕವಾಗಿ ಕಡಲ್ಕೊರೆತದಿಂದಾಗಿ ಮೀನುಗಾರರಿಗೆ, ಮೀನುಗಾರಿಕಾ ವೃತ್ತಿಯಲ್ಲಿ ತೊಡಗಿರುವ ಅನೇಕ ಕುಟುಂಬಗಳಿಗೆ ತೊಂದರೆ ಆದ ಹಿನ್ನೆಲೆಯಲ್ಲಿ ತುರ್ತಾಗಿ ತಡೆಗೋಡೆ ಮಾಡಬೇಕಾದ ಅಗತ್ಯವಿದೆ. 230 ಕೋಟಿ ರೂ. ಅನುದಾನದಲ್ಲಿ ಕಡಲ್ಕೊರೆತ ಕಾಮಗಾರಿಯು ಪ್ರಗತಿ ಯಲ್ಲಿದೆ, ಒಟ್ಟಾರೆಯಾಗಿ ಮೀನುಗಾರರು ಸಂಕಷ್ಟದಿಂದ ಪಾರಾಗಬೇಕೆಂಬುದು ಸರಕಾರದ ಆಶಯವಾಗಿದೆ ಎಂದು ಸಚಿವರು ತಿಳಿಸಿದರು.

ಜಿಪಂ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮುಖಂಡರಾದ ಚಂದ್ರಹಾಸ್ ಉಳ್ಳಾಲ್, ಸಂತೋಷ್ ಕುಮಾರ್ ರೈ ಬೋಳಿಯಾರ್, ಚಂದ್ರಹಾಸ್ ಪಂಡಿತ್‌ಹೌಸ್, ಹೇಮಂತ್ ಶೆಟ್ಟಿ, ಚಂದ್ರಶೇಖರ್ ಉಚ್ಚಿಲ್, ರವೀಂದ್ರ ಶೆಟ್ಟಿ ಉಳಿದೊಟ್ಟು, ಸೋಮೇಶ್ವರ ಪುರಸಭೆ ಅಧ್ಯಕ್ಷ ರಾಜೇಶ್ ಉಚ್ಚಿಲ್, ತಲಪಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಆಳ್ವ, ತಾಲೂಕು ಪಂಚಾಯತ್ ಸದಸ್ಯರಾದ ರವಿಶಂಕರ್ ಸೋಮೇಶ್ವರ, ನವೀನ್ ಪಾದಲ್ಪಾಡಿ, ಸೋಮೇಶ್ವರ ಪುರಸಭಾ ಆಯುಕ್ತೆ ವಾಣಿ ಆಳ್ವ, ಉಳ್ಳಾಲ ನಗರಸಭಾ ಆಯುಕ್ತ ರಾಯಪ್ಪ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News