​ಜಿ-7 ವಿಸ್ತರಣೆ ಪ್ರಸ್ತಾವ ಬೆನ್ನಲ್ಲೇ ಮೋದಿಗೆ ಶೃಂಗಸಭೆಗೆ ಆಹ್ವಾನ

Update: 2020-06-03 04:13 GMT
ಫೈಲ್ ಫೋಟೊ

ವಾಷಿಂಗ್ಟನ್, ಜೂ.3: ವಿಶ್ವದ ಏಳು ಪ್ರಬಲ ಆರ್ಥಿಕತೆಗಳ ಜಿ-7 ಕೂಟದ ಶೃಂಗಸಭೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿದ್ದಾರೆ. ಜಿ-7 ಗಾತ್ರ ಮತ್ತು ವ್ಯಾಪ್ತಿಯನ್ನು ವಿಸ್ತರಿಸುವ ಪ್ರಸ್ತಾವವನ್ನು ಅಮೆರಿಕ ಅಧ್ಯಕ್ಷರು ಮುಂದಿಟ್ಟ ಬೆನ್ನಲ್ಲೇ, ಅಮೆರಿಕದಲ್ಲಿ ನಡೆಯುವ ಜಿ-7 ಶೃಂಗಸಭೆಗೆ ಮೋದಿಯವರನ್ನು ಅಹ್ವಾನಿಸಲಾಗಿದೆ.

ಅಮೆರಿಕದಲ್ಲಿ ಜನಾಂಗೀಯ ಕಲಹ ತಾರಕಕ್ಕೇರಿರುವ ನಡುವೆಯೇ ದೂರವಾಣಿಯಲ್ಲಿ ಉಭಯ ಮುಖಂಡರು ಸುಮಾರು 25 ನಿಮಿಷಗಳ ಕಾಲ ಸಂಭಾಷಣೆ ನಡೆಸಿದರು. ಭಾರತ- ಚೀನಾ ಗಡಿ ಉದ್ವಿಗ್ನತೆ, ಕೋವಿಡ್-19 ಸಾಂಕ್ರಾಮಿಕ ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಸುಧಾರಣೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದರು ಎಂದು ತಿಳಿದುಬಂದಿದೆ. ಅಮೆರಿಕದಲ್ಲಿ ನಡೆಯುತ್ತಿರುವ ಜನಾಂಗೀಯ ಕಲಹದ ಬಗ್ಗೆ ಮೋದಿ ಆತಂಕ ವ್ಯಕ್ತಪಡಿಸಿದರು ಹಾಗೂ ಪರಿಸ್ಥಿತಿಯನ್ನು ತ್ವರಿತವಾಗಿ ಬಗೆಹರಿಸಲು ಸಾಧ್ಯವಾಗಲಿ ಎಂದು ಹಾರೈಸಿದರು ಎಂದು ಭಾರತದ ಪ್ರಕಟನೆ ಹೇಳಿದೆ.

ಜಿ-7 ವಿಸ್ತರಣೆ ಬಗೆಗಿನ ಟ್ರಂಪ್ ಅವರ ಅಭಿಪ್ರಾಯವನ್ನು ಮೋದಿ ಸೃಜನಶೀಲ ಮತ್ತು ದೂರದೃಷ್ಟಿಯ ಯೋಚನೆ ಎಂದು ಶ್ಲಾಘಿಸಿದರು. ಕೋವಿಡ್-19 ಬಳಿಕ ಉದಯವಾಗುವ ವಾಸ್ತವತೆಗಳ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಅರ್ಥಪೂರ್ಣ ಎಂದು ಹೇಳಿದರು. ಶೃಂಗದ ಯಶಸ್ಸಿಗೆ ಅಮೆರಿಕ ಹಾಗೂ ಇತರ ದೇಶಗಳ ಜತೆ ಕೈಜೋಡಿಸಲು ಭಾರತ ಉತ್ಸುಕವಾಗಿದೆ ಎಂದು ಮೋದಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News