ಸಾರ್ವಜನಿಕ ಸುರಕ್ಷತಾ ಕಾಯ್ದೆ ಹಿಂಪಡೆದ ಸರಕಾರ: ಶೀಘ್ರ ಶಾ ಫೈಸಲ್ ಬಿಡುಗಡೆ ಸಾಧ್ಯತೆ

Update: 2020-06-03 14:19 GMT

ಶ್ರೀನಗರ,ಜೂ.3: ಮಾಜಿ ಐಎಎಸ್ ಅಧಿಕಾರಿ ಹಾಗೂ ಹಾಲಿ ರಾಜಕಾರಣಿ ಶಾ ಫೈಸಲ್ ಮತ್ತು ಇಬ್ಬರು ಪಿಡಿಪಿ ನಾಯಕರಾದ ಪೀರ್ ಮನ್ಸೂರ್ ಹಾಗೂ ಸರ್ತಾಜ್ ಮದನಿ ಅವರ ವಿರುದ್ಧ ಸಾರ್ವಜನಿಕ ಸುರಕ್ಷತೆ ಕಾಯ್ದೆ (ಪಿಎಸ್‌ಎ)ಯಡಿ ಬಂಧನದ ಆದೇಶಗಳನ್ನು ಜಮ್ಮು-ಕಾಶ್ಮೀರ ಆಡಳಿತವು ಬುಧವಾರ ಹಿಂದೆಗೆದುಕೊಂಡಿದೆ. ಈ ನಾಯಕರು ಶೀಘ್ರವೇ ಜೈಲಿನಿಂದ ಬಿಡುಗಡೆಗೊಳ್ಳಲಿದ್ದಾರೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಕೇಂದ್ರವು ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂದೆಗೆದುಕೊಂಡ ಬಳಿಕ ವಿದೇಶಕ್ಕೆ ತೆರಳಲಿದ್ದ ಶಾ ಅವರನ್ನು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಫೆ.15ರಂದು ಅವರ ವಿರುದ್ಧ ಪಿಎಸ್‌ಎ ಹೇರಲಾಗಿತ್ತು. ಕಾಯ್ದೆಯಡಿ ಅವರ ಮೂರು ತಿಂಗಳ ಬಂಧನದ ಅವಧಿ ಅಂತ್ಯಗೊಳ್ಳುತ್ತಿದ್ದಂತೆ ಮೇ 14ರಂದು ಆಡಳಿತವು ಅವರ ಬಂಧನವನ್ನು ಇನ್ನೂ ಮೂರು ತಿಂಗಳಿಗೆ ವಿಸ್ತರಿಸಿತ್ತು. ಅವರನ್ನು ಶ್ರೀನಗರದ ಶಾಸಕರ ಹಾಸ್ಟೆಲ್‌ನಲ್ಲಿ ಬಂಧನದಲ್ಲಿಡಲಾಗಿದೆ.

ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಮತ್ತು ಲೇಖನಗಳ ಮೂಲಕ ‘ಮೃದು ಪ್ರತ್ಯೇಕತಾವಾದ ’ವನ್ನು ಪ್ರತಿಪಾದಿಸುತ್ತಿದ್ದ ಆರೋಪವನ್ನು ಶಾ ವಿರುದ್ಧ ಹೊರಿಸಲಾಗಿತ್ತು.

ಸೆಪ್ಟೆಂಬರ್ 2019ರಲ್ಲಿ ಶಾ ಅವರು ತನ್ನ ಬಂಧನವನ್ನು ಪ್ರಶ್ನಿಸಿ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದೆಗೆದುಕೊಂಡಿದ್ದರು. ಜಮ್ಮು-ಕಾಶ್ಮೀರದ ಹಲವಾರು ನಿವಾಸಿಗಳನ್ನು ಅಕ್ರಮವಾಗಿ ಬಂಧಿಸಲಾಗಿದೆ ಮತ್ತು ಅವರಿಗೆ ಕಾನೂನಿನ ಮೊರೆ ಹೋಗುವ ಅವಕಾಶಗಳೂ ಇಲ್ಲ ಎಂದು ಶಾ ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News