ರಾಜ್ಯದಲ್ಲಿ ಈವರೆಗೆ ಅಂಗವಿಲಕರ ನಿಖರವಾದ ಸರ್ವೆ ನಡೆದಿಲ್ಲ: ಸಚಿವ ಕೋಟ

Update: 2020-06-03 13:42 GMT

ಉಡುಪಿ, ಜೂ.3: ರಾಜ್ಯದಲ್ಲಿ 10ಲಕ್ಷಕ್ಕೂ ಅಧಿಕ ಮಂದಿ ಅಂಗವಿಲಕರು ಇದ್ದಾರೆ. ಆದರೆ ರಾಜ್ಯದಲ್ಲಿ ಸರಕಾರ ಈವರೆಗೆ ಅಂಗವಿಕಲರ ಬಗ್ಗೆ ನಿಖರವಾದ ಸರ್ವೆ ಮಾಡದ ಪರಿಣಾಮ ಸಾಕಷ್ಟು ಮಂದಿ ಸೌಲಭ್ಯಗಳಿಂದ ವಂಚಿತರಾಗಿ ದ್ದಾರೆ. ಆದುದರಿಂದ ಸರಕಾರ ರಾಜ್ಯದಲ್ಲಿ ಅಂಗವಿಕಲರ ಬಗ್ಗೆ ನಿಖರವಾಗಿ ಸರ್ವೆ ಮಾಡಬೇಕಾಗಿದೆ. ಇದಕ್ಕೆ ರೆಡ್‌ಕ್ರಾಸ್ ಪೂರ್ಣ ಸಹಕಾರವನ್ನು ನೀಡ ಬೇಕು ಎಂದು ರಾಜ್ಯ ಮೀನುಗಾರಿಕೆ, ಬಂದರು ಹಾಗೂ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ಜಿಲ್ಲಾ ಘಟಕ ವತಿಯಿಂದ ರೆಡ್‌ಕ್ರಾಸ್ ಭವನದಲ್ಲಿ ಬುಧವಾರ ಆಯೋಜಿಸಲಾದ ‘ಶತಮಾನೋತ್ಸವ ದಿನಾಚರಣೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಕೊರೋನ ವಿಚಾರದಲ್ಲಿ ಹಸಿರು ವಲಯ ಆಗಿದ್ದ ಉಡುಪಿ ಜಿಲ್ಲೆ ಈಗ ಕೆಂಪು ವಲಯ ಆಗಿ ಪರಿವರ್ತನೆಯಾಗಿದೆ. ಮೂರು ಪ್ರಕರಣ ಇರುವಾಗ ಹೆಮ್ಮೆಯಿಂದ ಹೇಳುತ್ತಿದ್ದ ನಾವು, ಈಗ 400 ಸಂಖ್ಯೆಗೆ ಏರಿಕೆಯಾದ ಬಳಿಕ ಆತಂಕಕ್ಕೆ ಒಳಗಾಗಿದ್ದೇವೆ. ಮಾನವೀಯ ನೆಲೆಯಲ್ಲಿ ಹೊರ ರಾಜ್ಯದಲ್ಲಿರುವ ನಮ್ಮವರನ್ನು ಕರೆಸಿಕೊಂಡು, ಈಗ ಅದರಿಂದ ಉದ್ಭವಿಸಿರುವ ಸಮಸ್ಯೆಗಳನ್ನು ಪರಿಹರಿಸುವ ಸವಾಲು ನಮ್ಮ ಮುಂದೆ ಇದೆ. ಎಲ್ಲರನ್ನು ವಿಶ್ವಾಸಕ್ಕೆ ತೆಗೆದು ಕೊಂಡು ಕೆಲಸ ಮಾಡುವುದು ಇಂದಿನ ಅನಿವಾರ್ಯ ಆಗಿದೆ ಎಂದರು.

ಇಂದು ಮನುಷ್ಯನನ್ನು ಮನುಷ್ಯ ನಂಬಲು ಸಾಧ್ಯ ಇಲ್ಲದ ಪರಿಸ್ಥಿತಿಯನ್ನು ಈ ಕೊರೋನ ತಂದು ಬಿಟ್ಟಿದೆ. ಬದುಕೆ ದುಸ್ತರವಾಗಿರುವ ಇಂದಿನ ಸಂದರ್ಭದಲ್ಲಿ ಸರಕಾರ ಮತ್ತು ಸಮಾಜ ತನ್ನ ಜವಾಬ್ದಾರಿಯನ್ನು ನಿರ್ವಹಿಸ ಬೇಕಾಗಿದೆ. ಮತ್ತೆ ಸುಸ್ಥಿರವಾದ ಸಮಾಜ ಕಟ್ಟುವ ಜವಾಬ್ದಾರಿ ಸರಕಾರದ ಮೇಲಿದೆ. ಕೊರೋನ ನಿಯಂತ್ರಣದಲ್ಲಿ ಬೆರಳೆಣಿಕೆಯ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು ಆಗಿದೆ ಎಂದು ಅವರು ತಿಳಿಸಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಸಭಾಪತಿ ಪ್ರತಾಪ್‌ಚಂದ್ರ ಶೆಟ್ಟಿ, ರೆಡ್‌ಕ್ರಾಸ್ ಸಂಸ್ಥೆ ಸಂಸ್ಥಾಪಕ ಸರ್ ಜೀನ್ ಹೆನ್ರಿ ಡ್ಯುನಾಂಟ್ ಅವರ ಪ್ರತಿಮೆ ಅನಾವರಣ ಹಾಗೂ ಸಂಸ್ಥೆ ಕಟ್ಟಡ ಆವರಣ ಗೋಡೆಯ ಉದ್ಘಾಟನೆಯನ್ನು ನೆರವೇರಿಸಿದರು. ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ಜಿಲ್ಲೆಯಲ್ಲಿ ಗುರುತಿ ಸಲ್ಪಟ್ಟ ವಿಕಲಚೇತನರಿಗೆ ಕೃತಕ ಕಾಲು, ಪರಿಶಿಷ್ಟ ಪಂಗಡದ 300 ಕುಟುಂಬ ಗಳಿಗೆ ದಿನಸಿ ಕಿಟ್ ಹಾಗೂ ಜಂತುಹುಳದ ಮಾತ್ರೆಗಳನ್ನು ವಿತರಿಸಲಾಯಿತು.

ಕೋವಿಡ್-19 ನಿಯಂತ್ರಣ ಹಾಗೂ ತಪಾಸಣೆ ಕಾರ್ಯದಲ್ಲಿ ತೊಡಗಿಸಿ ಕೊಂಡ ವೈದ್ಯರು, ದಾದಿಯರು, ಆಶಾ ಕಾರ್ಯಕರ್ತೆರು, ಪೊಲೀಸ್ ಸಿಬಂದಿ ಗಳನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಉಡುಪಿ ಜಿಲ್ಲಾ ಸಭಾಪತಿ ಬಸ್ರೂರು ರಾಜೀವ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗೌರವ ಕಾರ್ಯದರ್ಶಿ ಡಾ.ಅಶೋಕ್ ಕುಮಾರ್ ವೈ.ಜೆ. ಸ್ವಾಗತಿಸಿದರು. ಕೋಶಾಧಿಕಾರಿ ಡಿ.ಚಂದ್ರ ಶೇಖರ್, ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಕೆ. ಉಪಸ್ಥಿತರಿದ್ದರು. ಜಯರಾಮ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News