ವಿಶಾಖಪಟ್ಟಣ ಗ್ಯಾಸ್ ಸೋರಿಕೆ ದುರಂತಕ್ಕೆ ಎಲ್‌ಜಿ ಪಾಲಿಮರ್ಸ್ ಸಂಸ್ಥೆಯೇ ಹೊಣೆ: ಎನ್‌ಜಿಟಿ

Update: 2020-06-03 16:07 GMT

ಹೊಸದಿಲ್ಲಿ, ಜೂ.3: ವಿಶಾಖಪಟ್ಟಣಂ ಸ್ಥಾವರದಲ್ಲಿ ನಡೆದ ಅನಿಲ ಸೋರಿಕೆ ದುರಂತದಿಂದ ಆಗಿರುವ ಪ್ರಾಣ ಹಾನಿ ಮತ್ತು ಸಾರ್ವಜನಿಕರ ಆರೋಗ್ಯದ ಮೇಲಾಗಿರುವ ದುಷ್ಪರಿಣಾಮಕ್ಕೆ ದಕ್ಷಿಣ ಕೊರಿಯಾದ ಎಲ್‌ಜಿ ಪಾಲಿಮರ್ಸ್ ಇಂಡಿಯಾ ಸಂಸ್ಥೆಯೇ ಹೊಣೆ ಎಂದು ಎನ್‌ಜಿಟಿ ಹೇಳಿದ್ದು, ಸಂತ್ರಸ್ತರಿಗೆ ಪರಿಹಾರ ನೀಡಲು ಮತ್ತು ಪರಿಸರಕ್ಕೆ ಆಗಿರುವ ಹಾನಿಯನ್ನು ಸರಿದೂಗಿಸಲು ಸಂಸ್ಥೆಯ ಮೇಲೆ 50 ಕೋಟಿ ರೂ. ಮಧ್ಯಂತರ ದಂಡ ವಿಧಿಸಬೇಕೆಂದು ಸೂಚಿಸಿದೆ.

ಪರಿಸರ ಇಲಾಖೆ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ತಲಾ ಇಬ್ಬರು ಸದಸ್ಯರು ಹಾಗೂ ಆಂಧ್ರಪ್ರದೇಶ ಸರಕಾರದ ಮೂವರು ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಪುನಃಸ್ಥಾಪನೆ ಯೋಜನೆಯನ್ನು ರೂಪಿಸಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ ತಿಳಿಸಿದ್ದು, 50 ಕೋಟಿ ದಂಡ ವಿಧಿಸಿ ಮೇ 8ರಂದು ಹೊರಡಿಸಿದ್ದ ಆದೇಶದ ಮರುಪರಿಶೀಲನೆ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿದೆ.

ಪರಿಸರ ಸಚಿವಾಲಯ, ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ನ್ಯಾಷನಲ್ ಎನ್ವಯರನ್‌ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಪ್ರತಿನಿಧಿಗಳನ್ನು ಒಳಗೊಂಡ ಸಮಿತಿಯು ಪರಿಹಾರ ಮೊತ್ತದ ಪ್ರಮಾಣವನ್ನು ನಿರ್ಧರಿಸಬೇಕು ಎಂದು ಎನ್‌ಜಿಟಿ ಅಧ್ಯಕ್ಷ ನ್ಯಾ ಆದರ್ಶ್ ಕುಮಾರ್ ಗೋಯಲ್ ಹೇಳಿದ್ದಾರೆ. ಅಲ್ಲದೆ, ಶಾಸನಬದ್ಧ ಅನುಮತಿ ಪಡೆಯದೆ ಎರಡು ತಿಂಗಳೊಳಗೆ ಸಂಸ್ಥೆ ಮರಳಿ ಕಾರ್ಯಾರಂಭ ಮಾಡಲು ಕಾನೂನನ್ನು ಮೀರಿ ಅವಕಾಶ ನೀಡಿದ ಅಧಿಕಾರಿಗಳನ್ನು ಗುರುತಿಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಂಧ್ರಪ್ರದೇಶದ ಮುಖ್ಯ ಕಾರ್ಯದರ್ಶಿಗೆ ಎನ್‌ಜಿಟಿ ಸೂಚಿಸಿದೆ.

ಅಲ್ಲದೆ ಪರಿಸರ ನಿಯಮಗಳನ್ನು ಉಲ್ಲಂಘಿಸುವುದನ್ನು ತಡೆಯುವ ಹಾಗೂ ಅನಿಲ ಸೋರಿಕೆಯಂತಹ ದುರಂತಗಳು ಭವಿಷ್ಯದಲ್ಲಿ ಮರುಕಳಿಸದಂತೆ ತಡೆಯುವ ವ್ಯವಸ್ಥೆಯನ್ನು ರೂಪಿಸಲು ಸಲಹೆ ನೀಡುವ ನಿಟ್ಟಿನಲ್ಲಿ ತಜ್ಞರ ಸಮಿತಿಯನ್ನು ರೂಪಿಸುವಂತೆ ಮತ್ತು ಈ ಬಗ್ಗೆ ಕೈಗೊಂಡ ಕ್ರಮದ ಬಗ್ಗೆ 3 ತಿಂಗಳೊಳಗೆ ವರದಿ ಸಲ್ಲಿಸಲು ಪರಿಸರ ಇಲಾಖೆಗೆ ಸೂಚಿಸಿತು.

ಜನ, ಪರಿಸರದ ಸುರಕ್ಷತೆಗೆ ಮೊದಲ ಆದ್ಯತೆ

ಯಾವುದೇ ಉದ್ಯಮ ಅಥವಾ ಆರ್ಥಿಕ ಚಟುವಟಿಕೆಯಾಗಲೀ, ಜನ ಮತ್ತು ಪರಿಸರದ ಸುರಕ್ಷತೆಗೆ ಪ್ರಥಮ ಆದ್ಯತೆ ನೀಡಬೇಕು. ಸುಸ್ಥಿರ ಅಭಿವೃದ್ಧಿ ತತ್ವವನ್ನು ಪಾಲಿಸುವ ಮೂಲಕ ಮನುಷ್ಯನ ಜೀವಕ್ಕೆ, ಆರೋಗ್ಯಕ್ಕೆ ಮತ್ತು ಪರಿಸರದ ಮೇಲಾಗುವ ಹಾನಿಯನ್ನು ತಪ್ಪಿಸಬೇಕು ಎಂದು ಎನ್‌ಜಿಟಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News