ಸೌದಿ ಅರೇಬಿಯಾದಿಂದ ಮಂಗಳೂರಿಗೆ ಬಂದ ಬಾಡಿಗೆ ವಿಮಾನ : ಅಲ್‌ಮುಝೈನ್ ಕಂಪೆನಿಯ ಕೊಡುಗೆ

Update: 2020-06-03 17:45 GMT

ಮಂಗಳೂರು, ಜೂ.3: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೀಡಾದ ಅಲ್‌ಮುಝೈನ್ ಕಂಪೆನಿಯ ನೌಕರ ವರ್ಗ ಮತ್ತವರ ಕುಟುಂಬದ ಸದಸ್ಯರನ್ನು ಒಳಗೊಂಡ 169 ಪ್ರಯಾಣಿಕರನ್ನು ಹೊತ್ತ ವಿಮಾನವು ಸೌದಿ ಅರೇಬಿಯಾದಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಮಂಗಳವಾರ ರಾತ್ರಿ ತಲುಪಿತು.

ಕೊರೋನ-ಲಾಕ್‌ಡೌನ್ ಬಳಿಕ ಇದು ಮಂಗಳೂರಿಗೆ ಬಂದ ಪ್ರಪ್ರಥಮ ಬಾಡಿಗೆ ವಿಮಾನವಾಗಿದೆ. ಇದರ ಬಾಡಿಗೆಯನ್ನು ಅಲ್ ಮುಝೈನ್ ಕಂಪೆನಿಯೇ ಭರಿಸಿರುವುದು ವಿಶೇಷ. ಈ ವಿಮಾನದಲ್ಲಿದ್ದ 169 ಮಂದಿಯನ್ನೂ ಕೂಡ ಕ್ವಾರಂಟೈನ್‌ಗೊಳಪಡಿಸಲಾಗಿದ್ದು, ಅದರ ವೆಚ್ಚವನ್ನು ಉದ್ಯಮಿ ಝಕರಿಯಾ ಬಜ್ಪೆ ಮಾಲಕತ್ವದ ಅಲ್‌ಮುಝೈನ್ ಕಂಪೆನಿಯೇ ಭರಿಸಿದೆ. ಇದು ೌಕರ ವರ್ಗ ಮತ್ತವರ ಕುಟುಂಬದ ಸದಸ್ಯರಿಗೆ ಅಲ್‌ಮುಝೈನ್ ಕಂಪೆನಿಯ ಕೊಡುಗೆ ಎಂದು ಬಣ್ಣಿಸಲಾಗುತ್ತದೆ.

ಈ ಬಗ್ಗೆ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ ಝಕರಿಯಾ ಬಜ್ಪೆ ‘ತಾತ್ಕಾಲಿಕ ವೀಸಾದ ಮೇಲೆ ಬಂದಿದ್ದ ನೂರಾರು ನೌಕರರು ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೀಡಾಗಿದ್ದರು. ಅವರ ಕುಟುಂಬದ ಸದಸ್ಯರು ಅನೇಕ ಸಮಸ್ಯೆಯನ್ನು ಎದುರಿಸುತ್ತಿದ್ದರು. ಇದನ್ನು ಮನ ಗಂಡು ಸುಮಾರು 1400 ನೌಕರ ವರ್ಗ ಮತ್ತವರ ಕುಟುಂಬದ ಸದಸ್ಯರನ್ನು ಕಂಪೆನಿಯ ವೆಚ್ಚದಲ್ಲೇ ಊರಿಗೆ ಕಳುಹಿಸಿಕೊಡಲು 9 ಬಾಡಿಗೆ ವಿಮಾನವನ್ನು ಗೊತ್ತುಪಡಿಸಲಾಗಿತ್ತು. ಆ ಪೈಕಿ ಮಂಗಳವಾರ ಚೆನ್ನೈ, ಅಹ್ಮದಾಬಾದ್ ಮತ್ತು ಮಂಗಳೂರಿಗೆ ಮೂರು ವಿಮಾನ ಸೌದಿ ಅರೇಬಿಯಾದಿಂದ ತೆರಳಿದೆ. ಪ್ರತಿಯೊಂದು ವಿಮಾನದಲ್ಲೂ ತಲಾ 169 ಮಂದಿ ಪ್ರಯಾಣಿಕರಿದ್ದರು. ಬುಧವಾರ 1 ವಿಮಾನ ಕೊಚ್ಚಿಗೆ ತಲುಪಿದೆ. ಇನ್ನು ಜೂ.5 ಮತ್ತು 8ರಂದು ಮಂಗಳೂರಿಗೆ ವಿಮಾನ ತಲುಪಲಿದೆ. ಅಲ್ಲದೆ, ಚೆನ್ನೈಗೆ 2, ಹೈದರಾಬಾದ್‌ಗೆ 1, ದಿಲ್ಲಿಗೆ 1 ವಿಮಾನ ಹೊರಡಲಿದೆ’ ಎಂದಿದ್ದಾರೆ.

ಈವರೆಗೆ ದುಬೈಯಿಂದ 2 ಮತ್ತು ಕತರ್‌ನಿಂದ 1 ವಿಮಾನ ಮಂಗಳೂರಿಗೆ ತಲುಪಿತ್ತು. ಆದರೆ, ಸೌದಿ ಅರೇಬಿಯಾದಿಂದ ಯಾವ ವಿಮಾನವು ಬಂದಿರಲಿಲ್ಲ. ಇದೇ ಮೊದಲ ಬಾರಿಗೆ ಬಾಡಿಗೆ ವಿಮಾನವು ಮಂಗಳವಾರ ರಾತ್ರಿ ತಲುಪಿದೆ. ಕಳೆದ 20 ದಿನದಿಂದ ಕಂಪೆನಿಯು ಮಾಡಿದ ವಿಶೇಷ ಪ್ರಯತ್ನಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಇದಕ್ಕೆ ನಾವು ಸೌದಿ ಅರೇಬಿಯಾದ ಭಾರತೀಯ ರಾಯಭಾರಿ ಕಚೇರಿಯ ಎಲ್ಲಾ ಅಧಿಕಾರಿಗಳಿಗೆ ಅಭಾರಿಯಾಗಿದ್ದೇವೆ. ನಾವು ಪ್ರಯತ್ನಪಟ್ಟರೂ ಕೂಡ ಅವರು ನೀಡಿದ ಸಹಕಾರದಿಂದ ಇದೆಲ್ಲಾ ಸಾಧ್ಯವಾಯಿತು ಎಂದು ಝಕರಿಯಾ ಬಜ್ಪೆ ತಿಳಿಸಿದ್ದಾರೆ.

ಭಾರತ ಸರಕಾರದ ಮಾರ್ಗಸೂಚಿಯಂತೆ ಎಲ್ಲಾ ಪ್ರಯಾಣಿಕರ ಕೋವಿಡ್ ಪರೀಕ್ಷೆಯನ್ನು ಕಂಪೆನಿಯ ವತಿಯಿಂದಲೇ ಮಾಡಲಾಗುತ್ತದೆ. ಅಲ್ಲದೆ ಪ್ರಯಾಣಿಕರಿಗೆ ಬೇಕಾದ ಮಾಸ್ಕ್, ಗ್ಲೌಸ್, ಕ್ವಾರಂಟೈನ್ ವ್ಯವಸ್ಥೆ, ಹೊಟೇಲ್-ಲಾಡ್ಜ್ ವೆಚ್ಚವನ್ನು ಕೂಡ ನಾವೇ ಭರಿಸುತ್ತಿದ್ದೇವೆ. ಸುರಕ್ಷಿತ ಅಂತರಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆ. ನೌಕರರು ಮತ್ತವರ ಕುಟುಂಬಕ್ಕೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಝಕರಿಯಾ ಬಜ್ಪೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News