ಅರ್ಜುನ ಪ್ರಶಸ್ತಿ: ಆಯ್ಕೆಯ ಮಾನದಂಡ ಪ್ರಶ್ನನಿಸಿದ ಬ್ಯಾಡ್ಮಿಂಟನ್ ಸ್ಟಾರ್ ಪ್ರಣಯ್

Update: 2020-06-04 06:00 GMT

ಹೊಸದಿಲ್ಲಿ, ಜೂ.3: ಪ್ರತಿಷ್ಠಿತ ಅರ್ಜುನ ಪ್ರಶಸ್ತಿಗೆ ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾ (ಬಿಎಐ) ತನ್ನ ಹೆಸರನ್ನು ಶಿಫಾರಸು ಮಾಡದ ಹಿನ್ನೆಲೆಯಲ್ಲಿ ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಎಸ್.ಪ್ರಣಯ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬ್ಯಾಡ್ಮಿಂಟನ್ ಅಂಗಣದಲ್ಲಿ ಪ್ರದರ್ಶನ ನೀಡುವ ಆಟಗಾರರನ್ನು ಕಡೆಗಣಿಸಿ ತಮಗೆ ಇಷ್ಟ ಬಂದವರನ್ನು ಅರ್ಜುನ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ ಎಂದು ಆರೋಪಿಸಿದರು.

 ಪ್ರಣಯ್ ಅವರ ಸಹ ಆಟಗಾರ ಬಿ .ಸಾಯಿ ಪ್ರಣೀತ್ ಅವರನ್ನು ಬ್ಯಾಡ್ಮಿಂಟನ್ ಅರ್ಜುನ ಪ್ರಶಸ್ತಿಗೆ ನಾಮನಿರ್ದೇಶನ ಮಾಡಲಾಗಿದೆ. ಬ್ಯಾಡ್ಮಿಂಟನ್ ಅಸೋಸಿಯೇಶನ್ ಆಫ್ ಇಂಡಿಯಾದಿಂದ ಶಿಫಾರಸು ಮಾಡಲ್ಪಟ್ಟ ಡಬಲ್ಸ್ ಜೋಡಿ ಮನು ಅತ್ರಿ ಮತ್ತು ಪ್ರಣಯ್ ಅವರನ್ನು 12 ಸದಸ್ಯರ ಆಯ್ಕೆ ಸಮಿತಿಯು ಕಡೆಗಣಿಸಿದೆ ಎನ್ನಲಾಗಿದೆ.

 ‘‘ಪ್ರಶಸ್ತಿ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೀವು ಎಂದಾದರೂ ಸೇರ್ಪಡೆಗೊಳಿಸಲು ಬಯಸಿದರೆ, ನಿಮ್ಮ ಹೆಸರನ್ನು ಪಟ್ಟಿಗೆ ಸೇರಿಸಿಕೊಳ್ಳುವ ಆಸಕ್ತಿ ಇರುವವರನ್ನು ನೀವು ಹೊಂದಿರುವಿರಾ ಎಂದು ಮೊದಲು ಖಚಿತಪಡಿಸಿಕೊಳ್ಳಿ. ಕಾರ್ಯಕ್ಷಮತೆಯನ್ನು ನಮ್ಮ ದೇಶದಲ್ಲಿ ಕಡಿಮೆ ಪರಿಗಣಿಸಲಾಗುತ್ತದೆ. ಇದು ದುಃಖದ ವಿಚಾರ. ನಿಮ್ಮಲ್ಲಿ ಸಾಮರ್ಥ್ಯವಿರುವ ತನಕ ಆಟವಾಡಿ ’’ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರಣಯ್ ಟ್ವೀಟ್ ಮಾಡಿದ್ದಾರೆ.

ಕುತೂಹಲಕಾರಿ ಸಂಗತಿ ಯೆಂದರೆ, ಅರ್ಜುನ ಪ್ರಶಸ್ತಿಗೆ ಪ್ರಣಯ್ ಅವರ ಶಿಫಾರಸು ಕ್ರೀಡಾ ಸಚಿವಾಲಯಕ್ಕೆ ತಡವಾಗಿ ಹೋಗಿದೆ ಎಂದು ಬಿಎಐ ಮೂಲವೊಂದು ತಿಳಿಸಿದೆ.

 27ರ ಹರೆಯದ ಪ್ರಣಯ್ ಅವರು 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಿಶ್ರ ಡಬಲ್ಸ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದಿದ್ದರು. 2018ರ ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಪುರುಷರ 2016ರ ಏಶ್ಯನ್ ಟೀಮ್ ಚಾಂಪಿಯನ್‌ಶಿಪ್‌ನಲ್ಲಿ ಅವರ ತಂಡ ಕಂಚು ಜಯಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News