ಎರಡು ತಿಂಗಳ ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡಿದ ಯುವ ಉದ್ಯಮಿ

Update: 2020-06-04 13:56 GMT
ಇಕ್ಬಾಲ್

ಬಂಟ್ವಾಳ, ಜೂ. 4: ಕೋವಿಡ್ - 19 (ಕೊರೋನ) ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್‍ಡೌನ್ ಜಾರಿಯಾಗಿದ್ದು ಆ ಬಳಿಕವೂ ವ್ಯಾಪಾರ, ಕೆಲಸವಿಲ್ಲದೆ ಜನರು ಸಂಕಷ್ಟಕ್ಕೆ ಒಳಗಾಗಿರುವುದನ್ನು ಮನಗಂಡು ಬಂಟ್ವಾಳದ ಉದ್ಯಮಿಯೊಬ್ಬರು ತನ್ನ ಕಟ್ಟಡಗಳಲ್ಲಿ ಬಾಡಿಗೆಯಲ್ಲಿರುವ ಅಂಗಡಿ, ಮನೆಗಳ ಎರಡು ತಿಂಗಳ ಲಕ್ಷಾಂತರ ರೂ. ಬಾಡಿಗೆ ಮನ್ನಾ ಮಾಡುವ ಮೂಲಕ ಮಾನವೀಯತೆ ಮರೆದಿದ್ದಾರೆ.

ಸೈಮ್ ಗ್ರೂಪ್ ಆಫ್ ಕಂಪೆನಿ ಹಾಗೂ ಬಿ.ಸಿ.ರೋಡ್ ಕೈಕಂಬದ ನಿಶ್ಬಾ ಸೂಪರ್ ಮಾರ್ಕೆಟ್ ಮಾಲಕ ಮೂಲತಃ ಬಂಟ್ವಾಳ ಕೆಳಗಿನಪೇಟೆ ನಿವಾಸಿ ಇಕ್ಬಾಲ್ ತನ್ನ ಕಟ್ಟದಲ್ಲಿರುವ ರಾಷ್ಟ್ರೀಕೃತ ಬ್ಯಾಂಕ್ ಗಳನ್ನು ಹೊರೆತುಪಡಿಸಿ ಬಾಕಿ ಎಲ್ಲಾ ಬಾಡಿಗೆದಾರರ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.

ಬಂಟ್ವಾಳ, ಬಿ.ಸಿ.ರೋಡ್, ಉಪ್ಪಳ, ಮಂಗಳೂರಿನಲ್ಲಿ ವಾಣಿಜ್ಯ ಹಾಗೂ ವಸತಿ ಕಟ್ಟಡಗಳನ್ನು ಹೊಂದಿರುವ ಇವರು ತನ್ನ ಕಟ್ಟಡಗಳಲ್ಲಿ ಬಾಡಿಗೆಯಲ್ಲಿರುವ ಎಲ್ಲಾ ಅಂಗಡಿ, ಮನೆಗಳ ಎರಡು ತಿಂಗಳ ಸುಮಾರು 14 ಲಕ್ಷ ರೂ. ಬಾಡಿಗೆಯನ್ನು ಮನ್ನಾ ಮಾಡಿದ್ದಾರೆ. ಇವರ ಈ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಪ್ರಸಕ್ತ ಮಂಗಳೂರಿನಲ್ಲಿ ಪತ್ನಿ, ಮೂವರು ಪುತ್ರರು, ತಂದೆ, ತಾಯಿಯೊಂದಿಗೆ ವಾಸವಿರುವ ಇಕ್ಬಾಲ್ ಬಹರೈನ್, ಸೌದಿ ಅರೇಬಿಯಾ, ದುಬೈಯಲ್ಲಿ ಉದ್ಯಮವನ್ನು ಹೊಂದಿದ್ದಾರೆ. ಲಾಕ್‍ಡೌನ್‍ನಿಂದ ಸಂಕಷ್ಟಕ್ಕೆ ಒಳಗಾದ ತನ್ನ ಬಾಡಿಗೆದಾರರ ಲಕ್ಷಾಂತರ ರೂ. ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇಕ್ಬಾಲ್ ಬಾಡಿಗೆ ಮನೆಗಳಿರುವ ಮಾಲಕರಿಗೆ ಮಾದರಿ ಎನಿಸಿದ್ದಾರೆ.

ಕೆಲವು ಬಾಡಿಗೆದಾರರ ಕೆಲವು ತಿಂಗಳ ಬಾಡಿಗೆ ಬಾಕಿ ಇದೆ. ಅದನ್ನು ವಸೂಲಿ ಮಾಡುವ ಸಮಯ ಇದಲ್ಲ. ದೇವರು ಕೊಟ್ಟದನ್ನು ಸಂಕಷ್ಟದಲ್ಲಿರುವ ಜನರಿಗೆ ಕೊಡಬೇಕು.‌ ಅದು ಯಾವುದೇ ಪ್ರಚಾರಕ್ಕಾಗಿ ಅಲ್ಲ. ಮನುಷ್ಯರು ಪರಸ್ಪರ ಈಗ ಸಹಾಯ, ಸಹಕಾರ ಮಾಡದಿದ್ದರೆ ಮತ್ತೆ ಯಾವಾಗ ಮಾಡುವುದು ? ಜಾತಿ, ಧರ್ಮ, ದ್ವೇಷ ಮಾಡುವ ಸಮಯ ಇದಲ್ಲ. ಇದು ಮಾನವೀಯತೆ ಮೆರೆಯುವ ಸಮಯ ಎಂದು ಇಕ್ಬಾಲ್ ಹೇಳಿದ್ದಾರೆ.

ಬಾಡಿಗೆ ಮನೆಗಳು, ಅಂಗಡಿಗಳು, ಉದ್ಯಮವನ್ನು ಹೊಂದಿರುವ ನಮಗೆ ಕೊರೋನ ಹಿನ್ನೆಲೆಯಲ್ಲಿ ಲಾಕ್ ಡೌನ್ ನಿಂದ ಆರ್ಥಿಕ ಸಂಕಷ್ಟ ಉಂಟಾಗಿದೆ. ಇನ್ನು ದಿನ ನಿತ್ಯ ದುಡಿದು ತಿನ್ನುವವರ ಪರಿಸ್ಥಿತಿ ಏನಾಗಿರಬಹುದು ? ಎರಡು ತಿಂಗಳ ಕಾಲ ಅಂಗಡಿಗಳು ಬಂದ್ ಆಗಿದ್ದವು. ಲಾಕ್ ಡೌನ್ ತೆರವು ಆಗಿದ್ದರೂ ಅಂಗಡಿಗಳು ತೆರೆದಿದ್ದರೂ ವ್ಯಾಪಾರ ಇಲ್ಲದೆ ಅಂಗಡಿ ಮಾಲಕರು ತೀವ್ರ ಸಂಕಷ್ಟದಲ್ಲಿ ಇದ್ದಾರೆ. ಇವೆಲ್ಲವನ್ನು ಮನಗಂಡು ತನ್ನ ಕಟ್ಟಡದಲ್ಲಿ ಬಾಡಿಗೆಯಲ್ಲಿರುವವರ ಎರಡು ತಿಂಗಳ ಬಾಡಿಗೆಯನ್ನು ಮನ್ನಾ ಮಾಡಿದ್ದೇನೆ ಎಂದು ಇಕ್ಬಾಲ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ. 

ಕೊರೋನದಿಂದ ಉಂಟಾಗಿರುವ ಬಿಕ್ಕಟ್ಟು ಬೇಗ ಸರಿಯಾಗುವ ಲಕ್ಷಣ ಕಾಣುತ್ತಿಲ್ಲ. ಈಗಾಗಲೇ ಸರ್ವ ಧರ್ಮಗಳ ಜನರಿಗೆ ನನ್ನಿಂದ ಅಗುವ ಸಹಾಯ ಮಾಡಿದ್ದೇನೆ. ತನ್ನ ಕಟ್ಟಡದಲ್ಲಿ ಇರುವ ಬಾಡಿಗೆದಾರರ ಬಾಡಿಗೆ ಮನ್ನಾ ಅದರಲ್ಲಿ ಒಂದು. ಎಪ್ರಿಲ್ ಮತ್ತು ಮೇ ತಿಂಗಳ ಬಾಡಿಗೆಯನ್ನು ಈಗಾಗಲೇ ಮನ್ನಾ ಮಾಡಿದ್ದೇನೆ. ಇನ್ನೂ ಬಾಡಿಗೆ ಮನ್ನಾ ಮಾಡಬೇಕಾ ಎಂಬುದನ್ನು ಮುಂದಿನ ಪರಿಸ್ಥಿತಿ ನೋಡಿ ನಿರ್ಧಾರ ಮಾಡುತ್ತೇನೆ. 
- ಇಕ್ಬಾಲ್ ಬಂಟ್ವಾಳ, ಉದ್ಯಮಿ

ತಾನು ಕಷ್ಟದಲ್ಲಿದ್ದರೂ ಮತ್ತೊಬ್ಬರ ಕಷ್ಟಕ್ಕೆ ಸ್ಪಂದಿಸುವ ಹೃದಯ ವಿಶಾಲತೆ ಇಕ್ಬಾಲ್ ರದ್ದಾಗಿದೆ. ತನ್ನ ಕಟ್ಟಡದಲ್ಲಿರುವ ಬಾಡಿಗೆದಾರರ ಕಷ್ಟವನ್ನು ಅರ್ಥ ಮಾಡಿ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿದ್ದಾರೆ. ಇದರಿಂದ ನಮಗೆ ದೊಡ್ಡ ಉಪಕಾರವಾಗಿದೆ. ನಾವು ನಾಲ್ಕು ವರ್ಷಗಳಿಂದ ಇಕ್ಬಾಲ್ ಅವರಿಗೆ ಸೇರಿದ ಬಿ.ಸಿ.ರೋಡ್ ನ ಕಟ್ಟಡದಲ್ಲಿರುವ ಮನೆಯಲ್ಲಿ ಬಾಡಿಗೆಗೆ ಇದ್ದೇವೆ. ಬಾಡಿಗೆ ನೀಡುವುದು ತಡವಾದರೆ ಎಂದು ಅವರು ಮನೆ ಬಾಗಿಲಿಗೆ ಜನ ಕಳುಹಿಸುವವರು ಅಲ್ಲ. ಉತ್ತಮ ವ್ಯಕ್ತಿತ್ವದ ಅವರ ಈ ಕೆಲಸ ನಮಗೆಲ್ಲಾ ತುಂಬಾ ಸಹಕಾರಿ ಆಗಿದೆ. 

- ನಿಸಾರ್, ಫ್ಲಾಟ್ ನಲ್ಲಿ ಬಾಡಿಗೆ ಇರುವವರು 

ಉಪ್ಪಲ ಕೈಕಂಬದಲ್ಲಿರುವ ಇಕ್ಬಾಲ್ ಅವರಿಗೆ ಸೇರಿದ ಕಟ್ಟಡದಲ್ಲಿ ಮೂರು ವರ್ಷಗಳಿಂದ ಸೂಪರ್ ಮಾರ್ಕೆಟ್ ನಡೆಸುತ್ತಿದ್ದೇನೆ. ತಿಂಗಳಿಗೆ 60 ಸಾವಿರ ರೂಪಾಯಿ ಬಾಡಿಗೆ ಇದೆ. ಸೂಪರ್ ಮಾರ್ಕೆಟ್ ತೆರೆದಿದ್ದರೂ ಸ್ಟಾಕ್ ಇಲ್ಲದಿರುವುದರಿಂದ ವ್ಯಾಪಾರ ತುಂಬಾ ಕಡಿಮೆ ಇದೆ. ಸಿಬ್ಬಂದಿಯ ಸಂಬಳ, ಮೆಸ್ಕಾಂ ಬಿಲ್ ಹೊರೆಯಾಗುತ್ತಿದೆ. ಇಂಥಹ ಸಂದರ್ಭದಲ್ಲಿ ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿರುವುದು ನಮಗೆ ತುಂಬಾ ಸಹಾಯವಾಗಿದೆ. ಕೆಲವು ದಿನಗಳ ಹಿಂದೆ ಬಾಡಿಗೆ ನೀಡಲು ಹೋಗಿದ್ದಾಗ ಈಗ ಬೇಡ ಎಂದಿದ್ದರು. ಎರಡು ದಿನ ಬಿಟ್ಟು ಎರಡು ತಿಂಗಳ ಬಾಡಿಗೆ ಮನ್ನಾ ಮಾಡಿದ್ದೇನೆ ಎಂದು ಇಕ್ಬಾಲ್ ತಿಳಿಸಿದ್ದಾರೆ. 

- ಸಂಕೇತ್ ಕುಮಾರ್, ಬಾಡಿಗೆದಾರ

Writer - ಇಮ್ತಿಯಾಝ್ ಶಾ ತುಂಬೆ

contributor

Editor - ಇಮ್ತಿಯಾಝ್ ಶಾ ತುಂಬೆ

contributor

Similar News