ಸೌದಿಯಿಂದ ಕರ್ನಾಟಕಕ್ಕೆ ಹೆಚ್ಚಿನ ವಿಮಾನಕ್ಕಾಗಿ ಇಂಡಿಯನ್ ಸೋಶಿಯಲ್ ಫೋರಮ್ ಒತ್ತಾಯ

Update: 2020-06-04 08:54 GMT

ದಮಾಮ್: ಅನಿವಾಸಿಗರ ವಾಪಸಾತಿಗಾಗಿ ಐದನೆ ಹಂತದ ಕಾರ್ಯಾಚರಣೆಯಲ್ಲಿ ಕೇಂದ್ರ ಸರಕಾರ ಸೌದಿ ಅರೇಬಿಯಾದಿಂದ ಬೆಂಗಳೂರಿಗೆ ಮೂರು ವಿಮಾನಗಳನ್ನು ಘೋಷಿಸಿದ್ದು, ಇಂಡಿಯನ್ ಸೋಶಿಯಲ್ ಫೋರಮ್ ಸೌದಿ ಅರೇಬಿಯಾ ಇದನ್ನು ಸ್ವಾಗತಿಸುತ್ತದೆ. ಆದರೆ ಕೊರೋನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಅನಿವಾಸಿ ಕನ್ನಡಿಗರು ಸೌದಿ ಅರೇಬಿಯಾದಲ್ಲಿ ಸಿಲುಕಿರುವ ಹಿನ್ನೆಲೆಯಲ್ಲಿ ಕೇವಲ ಮೂರು ವಿಮಾನಗಳು ಏನೇನೂ ಸಾಲದು. ಈ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ವಿಮಾನ ವ್ಯವಸ್ಥೆಯನ್ನು ಕಲ್ಪಿಸುವಂತೆ ರಾಜ್ಯ ಸರಕಾರವು ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಇಂಡಿಯನ್ ಸೋಶಿಯಲ್ ಫೋರಮ್ ಒತ್ತಾಯಿಸಿದೆ.

ಪ್ರತಿ ನಿತ್ಯ ಹಲವು ಮಂದಿ ಅನಿವಾಸಿ ಕನ್ನಡಿಗರು ಸಂಕಷ್ಟಕ್ಕೀಡಾಗುತ್ತಿದ್ದು ಈ ಕುರಿತ ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಒಂದೆಡೆ ಗಂಭೀರ ಕಾಯಿಲೆಯ ಚಿಕಿತ್ಸೆಗಾಗಿ ಹೊರಟು ನಿಂತವರು, ಗರ್ಭಿಣಿಯರು, ಕಾಯಿಲೆ ಪೀಡಿತ ಹಿರಿಯರು ಸಿಲುಕಿಕೊಂಡಿದ್ದರೆ. ಇನ್ನೊಂದೆಡೆ ಹಲವು ಕಾರ್ಮಿಕರು ಉದ್ಯೋಗ ಕಳೆದುಕೊಂಡು ಅತಂತ್ರರಾಗಿದ್ದಾರೆ. ಕರ್ನಾಟಕದ ವಿವಿಧ ಭಾಗಗಳ ಜನರು ಇವರಲ್ಲಿದ್ದಾರೆ‌. ಇವರನ್ನು ಆದಷ್ಟು ಬೇಗನೆ ತವರಿಗೆ ಮರಳಿಸುವ ಕೆಲಸ ಆಗಬೇಕಾಗಿದೆ‌. ಸಂಕಷ್ಟದಲ್ಲಿರುವ ಕನ್ನಡಿಗರ ವಾಪಸಾತಿಗಾಗಿ ಕೇಂದ್ರ ಸರಕಾರ  ಸೌದಿ ಅರೇಬಿಯಾದ ವಿವಿಧ ಭಾಗಗಳಿಂದ ಹೆಚ್ಚು ವಿಮಾನಗಳನ್ನು ಏರ್ಪಾಡು ಮಾಡುವಂತೆ ರಾಜ್ಯ ಸರಕಾರ ಕೇಂದ್ರವನ್ನು ಮನವರಿಕೆ ಮಾಡಬೇಕು ಎಂಬುದಾಗಿ ಇಂಡಿಯನ್ ಸೋಶಿಯಲ್ ಫೋರಮ್ ಕರ್ನಾಟಕ ಇದರ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಇರ್ಶಾದ್ ಒತ್ತಾಯಿಸಿದ್ದಾರೆ.

ಸಂಕಷ್ಟದಲ್ಲಿರುವ ಅನಿವಾಸಿ ಕನ್ನಡಿಗರ ಸಂಖ್ಯೆ ಹೆಚ್ಚಿರುವುದನ್ನು ಮನಗಂಡು ವಿದೇಶಾಂಗ ಸಚಿವಾಲಯ ತಕ್ಷಣವೇ ಕನಿಷ್ಟ 20 ವಿಮಾನಗಳನ್ನು ಸೌದಿ ಅರೇಬಿಯಾದಿಂದ ಕರ್ನಾಟಕಕ್ಕೆ ಕಳುಹಿಸಬೇಕು ಎಂದು ಇರ್ಶಾದ್ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News