ಖಾಸಗೀಕರಣವೇ ಎನ್‌ಡಿಎ ಸಾಧನೆ: ರಮಾನಾಥ ರೈ ಟೀಕೆ

Update: 2020-06-04 11:29 GMT

ಮಂಗಳೂರು, ಜೂ.4: ದೇಶದಲ್ಲಿ ಕೋಟ್ಯಂತರ ಉದ್ಯೋಗಗಳನ್ನು ಸೃಷ್ಟಿಸಿ ರಾಷ್ಟ್ರೀಯ ಆಸ್ತಿಯಾಗಿದ್ದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುತ್ತಿರುವುದೇ ಎರಡನೇ ಬಾರಿಗೆ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರದ ಸಾಧನೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಟೀಕಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಿಮಾನ ನಿಲ್ದಾಣ, ಬಂದರು ಖಾಸಗೀಕರಣ ಮಾಡಿದ್ದು, ಇನ್ನು ಕಲ್ಲಿದ್ದಲು ಗಣಿ, ನಿಗಮಗಳು, ವಿದ್ಯುತ್ ಕಂಪನಿಗಳನ್ನು ಕೂಡಾ ಖಾಸಗೀಕರಣ ಮಾಡಲು ಹೊರಟಾಗಿದೆ ಎಂದರು.

ಖಾಸಗಿ ಮೊಬೈಲ್ ಕಂಪನಿಯ ಹಿತಾಸಕ್ತಿ ಕಾಪಾಡಲು ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮುಳುಗಿಸಿ ಲಕ್ಷಾಂತರ ಉದ್ಯೊಗಿಗಳನ್ನು ಬೀದಿಗೆ ತಳ್ಳಿರುವ ಸಾಧನೆಯೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಎನ್‌ಡಿಎ ಸರಕಾರ ಅಧಿಕಾರಕ್ಕೆ ಬಂದಂದಿನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಕಪ್ಪು ಹಣ ತರುವ ವಿಚಾರ ಹಳ್ಳ ಹಿಡಿದಿದೆ. ಜಿಡಿಪಿ ಪಾತಾಳಕ್ಕೆ ಕುಸಿದಿದ್ದು, ಈಗ ಕೊರೋನ ಕಾರಣ ಎಂದು ಹೇಳಲಾಗುತ್ತಿದೆ.

ಕೊರೋನದಿಂದ ಜಿಡಿಪಿ ಕುಸಿಯುವುದಾದರೆ, ಅಮೆರಿಕದಲ್ಲಿ ಡಾಲರ್ ಮೌಲ್ಯ ಕುಸಿಯಬೇಕಿತ್ತು. ಅಲ್ಲಿ ಕೊರೋನದಿಂದ ತತ್ತರಿಸಿದ್ದರೂ, ಕರೆನ್ಸಿ ಮೌಲ್ಯ ಕುಸಿದಿಲ್ಲ. ದೇಶದಲ್ಲಿ ಪೂರ್ವಾಲೋಚನೆ ಇಲ್ಲದೆ ಲಾಕ್‌ಡೌನ್ ಮಾಡಿದ್ದರಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ ಎಂದು ಅವರು ಆರೋಪಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿ.ಸಿ.ರೋಡ್‌ನಿಂದ ಅಡ್ಡಹೊಳೆ ತನಕದ ಚತುಷ್ಪಥ ಯೋಜನೆಯಿಂದ ಗುತ್ತಿಗೆದಾರ ಎಲ್ ಆ್ಯಂಡ್ ಟಿ ಕಂಪನಿ ಬಿಟ್ಟು ಹೋದದ್ದು ಇನ್ನೊಂದು ಸಾಧನೆ. ಈ ಯೋಜನೆಗಾಗಿ ನಾವು ಐದು ದಿನಗಳ ಪಾದಯಾತ್ರೆಯನ್ನೂ ಮಾಡಿದ್ದೆವು. ಮಂಗಳೂರು- ಮೂಡುಬಿದಿರೆ ಚತುಷ್ಪಥ ಯೋಜನೆ ಸ್ವಲ್ಪ ಪ್ರಗತಿಯೂ ಆಗಿಲ್ಲ. ರಾಜ್ಯ ಎಂಜಿನಿಯರಿಂಗ್ ಇಲಾಖೆಯಡಿ ಕಾರ್ಯಾಚರಿಸುವ ರಾಷ್ಟ್ರೀಯ ಹೆದ್ದಾರಿ ಇಲಾಖೆಯಿಂದ ಹೆದ್ದಾರಿ ಕಾಮಗಾರಿ ನಡೆದಿದ್ದು, ಅದು ತಮ್ಮ ಸಾಧನೆ ಎಂದು ಸಂಸದರು ಬೋರ್ಡ್ ಹಾಕಿದ್ದಾರೆ. ಜಿಲ್ಲೆಯ ಮೂರು ಬ್ಯಾಂಕ್‌ಗಳನ್ನು ನಾಮಾವಶೇಷ ಮಾಡಲಾಯಿತು ಎಂದು ಅವರು ಟೀಕಿಸಿದರು.

ಲಾಕ್‌ಡೌನ್ ಸಂಕಷ್ಟದಲ್ಲಿ ಮೆಸ್ಕಾಂ ಬಿಲ್ 3-4 ಪಟ್ಟು ಹೆಚ್ಚಿಸಲಾಗಿದೆ. ಅದನ್ನು ಕಡಿಮೆ ಮಾಡಲು ಸಿಎಂ ಹೇಳಿದರೂ, ಮೆಸ್ಕಾಂ ಒಪ್ಪುತ್ತಿಲ್ಲ ಅಂದರೆ, ಸಿಎಂಗೆ ಮೆಸ್ಕಾಂ ಮೇಲೆ ಯಾವುದೇ ಹಿಡಿತ ಇಲ್ಲವೇ ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಕೋಡಿಜಾಲ್ ಇಬ್ರಾಹಿಂ, ಶಾಹುಲ್ ಹಮೀದ್, ಅಬ್ದುಲ್ ರವೂಫ್, ಅಪ್ಪಿ, ನವೀನ್ ಡಿಸೋಜ, ಶಾಲೆಟ್ ಪಿಂಟೊ, ಶುಭೋದಯ ಆಳ್ವ, ಡಿ.ಕೆ.ಅಶೋಕ್ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News