ಜನರಿಗೆ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯ: ಅಂಚೆ ಇಲಾಖೆಯಿಂದ ವಿಶೇಷ ಖಾತೆ

Update: 2020-06-04 13:04 GMT

ಮಂಗಳೂರು, ಜೂ.4: ಭಾರತೀಯ ಅಂಚೆ ಇಲಾಖೆಯ ಮಂಗಳೂರು ವಿಭಾಗದಿಂದ ‘ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವಿಶೇಷ ಖಾತೆ ತೆರೆಯುವ ಅಭಿಯಾನವು ಜೂ.5ರಂದು ನಡೆಯಲಿದೆ. ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಾರ್ವಜನಿಕರ ಡಿಜಿಟಲ್ ಹಾಗೂ ಆನ್‌ಲೈನ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಮನೆಮನೆಗೆ ತಲುಪಿಸಲು ಈ ಅಭಿಯಾನ ನಡೆಸಲಾಗುತ್ತದೆ.

ಏನಿದರ ವಿಶೇಷತೆ?: ಇತರ ಬ್ಯಾಂಕ್ ಖಾತೆಗಳಿಗೆ ಹಾಗೂ ಖಾತೆಗಳಿಂದ ಹಣ ವರ್ಗಾವಣೆ, ನೆಫ್ಟ್, ಮೊಬೈಲ್ ರಿಚಾರ್ಜ್, ಡಿಟಿಎಚ್ ರಿಚಾರ್ಜ್, ಆನ್‌ಲೈನ್ ಮೂಲಕ ಅಂಚೆ ಕಚೇರಿಯ ಆರ್‌ಡಿ, ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆಗಳಿಗೆ ಹಣ ಜಮಾ ಮಾಡುವುದು ಹೀಗೆ ಹಲವು ವಿಶೇಷತೆಗಳು ‘ಐಪಿಪಿಬಿ’ಯಲ್ಲಿವೆ.

ವಿಧವಾ ವೇತನ, ವೃದ್ಧಾಪ್ಯ ವೇತನ, ಸಂಧ್ಯಾಸುರಕ್ಷಾ, ವಿಕಲಾಚೇತನ ವೇತನ, ವಿದ್ಯಾರ್ಥಿಗಳ ಸ್ಕಾಲರ್‌ಶಿಪ್, ಕಿಸಾನ್ ಸಮ್ಮಾನ್, ಗ್ಯಾಸ್‌ಸಬ್ಸಡಿ ಹೀಗೆ ಸರಕಾರದ ಹಲವು ಯೋಜನೆಗಳ ಪ್ರಯೋಜನ ಪಡೆಯಲು ಈ ಖಾತೆಯ ಮೂಲಕ ಸಾಧ್ಯವಾಗಲಿದೆ. ಇದರ ಮೂಲಕ ಆಧಾರ್ ಜೋಡಣೆಗೊಂಡ ಯಾವುದೇ ಬ್ಯಾಂಕ್ ಖಾತೆಯಿಂದ ಅಂಚೆ ಕಚೇರಿ ಅಥವಾ ಅಂಚೆಯಾಳಿನ ಮೂಲಕ ಮನೆ ಬಾಗಿಲಿನಲ್ಲಿ ಹಣವನ್ನು ಪಡೆಯಬಹುದು. ಚೆಕ್, ಎಟಿಎಂ ಯಾವುದೂ ಇದಕ್ಕೆ ಬೇಡ. ಕೇವಲ ಆಧಾರ್ ಸಂಖ್ಯೆ ಹಾಗೂ ಮೊಬೈಲ್ ಇದ್ದರೆ ಹಣವನ್ನು ಪಡೆಯಬಹುದು. ಈ ಖಾತೆಗಳಲ್ಲಿ ಕನಿಷ್ಠ ಶುಲ್ಕ ವೆಚ್ಚವನ್ನು ಕೂಡ ವಿಧಿಸುವುದಿಲ್ಲ.

ಖಾತೆ ಮಾಡಿಸುವುದು ಹೇಗೆ?: ಐಪಿಪಿಬಿ ಖಾತೆಯನ್ನು ಮಾಡಿಸಲು ಆಧಾರ್ ಸಂಖ್ಯೆ, ಮೊಬೈಲ್ ಹಾಗೂ ಕೇವಲ 100 ರೂ.ನೊಂದಿಗೆ ಸಮೀಪದ ಯಾವುದೇ ಅಂಚೆ ಕಚೇರಿಗೆ ಹೋದರೆ ಅಥವಾ ಅಂಚೆಯಾಳು ಮನೆಗೆ ಬಂದರೆ ಸಾಕು. ಕ್ಷಣದಲ್ಲೇ ಖಾತೆ ತೆರೆದು ಬ್ಯಾಂಕಿಂಗ್ ಸೇವೆಯ ಅಸೀಮಿತ ಅನುಕೂಲತೆಗಳನ್ನು ಪಡೆದುಕೊಳ್ಳಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News