ಗೃಹರಕ್ಷಕ ದಳದ ಸಿಬ್ಬಂದಿಯನ್ನು ಮರಳಿ ಕೆಲಸಕ್ಕೆ ನಿಯೋಜಿಸಲು ಒತ್ತಾಯಿಸಿ ಜಿಲ್ಲಾ ಎಸ್ಪಿಗೆ ಸಿಐಟಿಯು ಮನವಿ

Update: 2020-06-04 13:22 GMT

ಮಂಗಳೂರು, ಜೂ.4: ರಾಜ್ಯ ಸರಕಾರವು ದ.ಕ.ಜಿಲ್ಲೆಯ 220 ಗೃಹರಕ್ಷಕ ದಳದ ಸಿಬ್ಬಂದಿಯನ್ನು ತರಾತುರಿಯಲ್ಲಿ ಉದ್ಯೋಗದಿಂದ ಕೈಬಿಟ್ಟು ಅನ್ಯಾಯ ಎಸಗಿದ್ದು, ಇದನ್ನು ಸರಿಪಡಿಸಬೇಕು ಎಂದು ಆಗ್ರಹಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು)ಬೆಳ್ತಂಗಡಿ ತಾಲೂಕು ಸಮಿತಿಯು ದ.ಕ.ಜಿಲ್ಲಾ ಎಸ್ಪಿಯ ಮೂಲಕ ಮುಖ್ಯಮಂತ್ರಿಗೆ ಗುರುವಾರ ಮನವಿ ಸಲ್ಲಿಸಿದೆ.

ಹಲವು ವರ್ಷಗಳಿಂದ ಜಿಲ್ಲೆಯ ಪೊಲೀಸ್ ಠಾಣೆಗಳಲ್ಲಿ ಹಗಲು ರಾತ್ರಿ ಎನ್ನದೆ ಕರ್ತವ್ಯ ನಿರ್ವಹಿಸುತ್ತಿದ್ದ 220 ಗೃಹ ರಕ್ಷಕದಳ ಸಿಬ್ಬಂದಿಯನ್ನು ಜೂ.1ರಿಂದ ಮುಕ್ತಗೊಳಿಸಿ ಉದ್ಯೋಗದಿಂದ ಕೈ ಬಿಟ್ಟಿರುವುದು ಅಮಾನವೀಯ. ಗೃಹ ರಕ್ಷಕದಳದ ಸಿಬ್ಬಂದಿಯು ಹಗಲು ರಾತ್ರಿ, ಮಳೆ, ಗಾಳಿ, ಬಿಸಿಲು ಎನ್ನದೆ ಪೊಲೀಸ್ ಠಾಣೆಗಳು ಸೇರಿದಂತೆ ಹಲವು ಇಲಾಖೆಗಳಲ್ಲಿ ಹಲವಾರು ವರ್ಷಗಳಿಂದ ದುಡಿಯುತ್ತಿದ್ದರು. ಈಗ ರಾಜ್ಯ ಸರಕಾರ ಏಕಾಏಕಿ ಕೈ ಬಿಟ್ಟಿದೆ. ಬಡ ಕುಟುಂಬಗಳಿಗೆ ಸೇರಿದ ವಿದ್ಯಾವಂತ ನಿರುದ್ಯೋಗಿ ಯುವಕ/ಯುವತಿಯರ ಉದ್ಯೋಗಕ್ಕಾಗಿ ಗೃಹ ರಕ್ಷಕದಳದಲ್ಲಿ ದುಡಿಯುತ್ತಿದ್ದರು. ಇದರಿಂದಾಗಿ ಹಲವು ಕುಟುಂಬಗಳು ಜೀವನ ನಡೆಸುತ್ತಿದ್ದರು. ಆದರೆ ರಾಜ್ಯ ಸರಕಾರ ಕೊರೋನ-ಲಾಕ್‌ಡೌನ್ ಸಂದರ್ಭ ಗೃಹ ರಕ್ಷಕದ ದಳದ ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸುವ ಬದಲು ಅನ್ನದ ಬಟ್ಟಲನ್ನು ಕಸಿದಿರುವುದು ಖಂಡನೀಯ. ಉದ್ಯೋಗ ಕಳೆದುಕೊಂಡ ಎಲ್ಲಾ ಗೃಹರಕ್ಷಕ ದಳದ ಸಿಬ್ಬಂದಿಯನ್ನು ಮತ್ತೆ ಸೇರಿಸಿಕೊಳ್ಳಬೇಕು. ಪ್ರಸ್ತುತ ಜಾರಿಯಲ್ಲಿರುವ 15 ದಿನಗಳ ಉದ್ಯೋಗ ನೀತಿಯನ್ನು ಕೈಬಿಟ್ಟು ಪೂರ್ಣ ಪ್ರಮಾಣದ ಉದ್ಯೋಗ ನೀಡಬೇಕು. ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಸರ್ಕಾರಿ ಸಿಬ್ಬಂದಿಗಳೆಂದು ಘೋಷಿಸಬೇಕು. ವಿದ್ಯಾರ್ಹತೆ ಆಧಾರದಲ್ಲಿ ಪೊಲೀಸ್ ಇಲಾಖೆ ಸಹಿತ ಇತರ ಇಲಾಖೆಯ ನೇಮಕಾತಿ ಸಂದರ್ಭದಲ್ಲಿ ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಮೊದಲ ಪ್ರಾತಿನಿಧ್ಯ ನೀಡಬೇಕು. ಗೃಹರಕ್ಷಕ ದಳದಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಸಿಬ್ಬಂದಿಗಳ ಮೇಲಿನ ದೌರ್ಜನ್ಯ ತಡೆಯಲು ಪ್ರತಿ ಪೊಲೀಸ್ ಠಾಣೆ ಸೇರಿದಂತೆ ಇಲಾಖೆಗಳಲ್ಲಿ ಮಹಿಳಾ ದೌರ್ಜನ್ಯ ತಡೆ ಸಮಿತಿ ರಚಿಸಬೇಕು. ಮಹಿಳಾ ಸಿಬ್ಬಂದಿಗಳಿಗೆ ಹೆರಿಗೆ ರಜೆ, ಹೆರಿಗೆ ಭತ್ತೆ, ರಜಾ ಸಂಬಳ ನೀಡಬೇಕು. ರಾತ್ರಿ ವೇಳೆ ಮಹಿಳಾ ಸಿಬ್ಬಂದಿಗಳನ್ನು ಯಾವುದೇ ಕರ್ತವ್ಯಕ್ಕೆ ನಿಯೋಜಿಸಬಾರದು. ಇಎಸ್‌ಐ ಸಹಿತ ಕಾರ್ಮಿಕ ಸೌಲಭ್ಯಗಳನ್ನು ನೀಡಬೇಕು. ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಅಪಘಾತ ಸಹಿತ ಇತರ ಆರೋಗ್ಯ ಸಮಸ್ಯೆಯ ಸಂದರ್ಭ ಆರೋಗ್ಯ ಪರಿಹಾರ ನೀಡಬೇಕು. ಗೃಹರಕ್ಷಕ ದಳದ ಸಿಬ್ಬಂದಿಗಳ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡಬೇಕು. ನಿವೃತ್ತಿ ಹೊಂದುವ ಸಿಬ್ಬಂದಿಗಳಿಗೆ ನಿವೃತ್ತಿ ವೇತನ ನೀಡಬೇಕು ಎಂದು ಬೇಡಿಕೆ ಸಲ್ಲಿಸಲಾಗಿದೆ.

ಈ ಸಂದರ್ಭ ಸಿಐಟಿಯು ಬೆಳ್ತಂಗಡಿ ತಾಲೂಕು ಅಧ್ಯಕ್ಷ ಶಿವಕುಮಾರ್ ಎಸ್‌ಎಂ , ಉಪಾಧ್ಯಕ್ಷ ಶೇಖರ್ ಲಾಯಿಲ , ಶುಭಲಕ್ಷ್ಮಿ ಸುಳ್ಯ, ಸುಹಾಸ್ ಬೆಳ್ತಂಗಡಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News