ಬಂಟ್ವಾಳ: ಅಪರೂಪದ ಬಿಳಿ ಬಣ್ಣದ ಹೆಬ್ಬಾವು ಸೆರೆ

Update: 2020-06-04 14:12 GMT

ಬಂಟ್ವಾಳ, ಜೂ. 4: ತಾಲೂಕಿನ ಕಾವಳಕಟ್ಟೆಯಲ್ಲಿ ಮನೆಯೊಂದಕ್ಕೆ ಬಂದ ಅಪರೂಪದ ಬಿಳಿ ಬಣ್ಣದ ಹೆಬ್ಬಾವು ಒಂದನ್ನು ಉರಗ ತಜ್ಞ ಸ್ನೇಕ್ ಕಿರಣ್ ಅವರು ಸುರಕ್ಷಿತವಾಗಿ ಸೆರೆ ಹಿಡಿದು ಮಂಗಳೂರು ಪಿಲಿಕುಳ ನಿಸರ್ಗಧಾಮದ ಅಧಿಕಾರಿಗಳಿಗೆ ಹಸ್ತಾಂತರಿಸಿದ್ದಾರೆ.

ಅಪರೂಪದ ಬಿಳಿ ಬಣ್ಣದ 'ಆಲ್ಬಿನೊ' ಎಂಬ ಈ ಹೆಬ್ಬಾವು ಕಾವಳಕಟ್ಟೆ ನಿವಾಸಿ ನೌಶಾದ್ ಎಂಬವರ ಮನೆಯಲ್ಲಿ ಕಾಣಿಸಿಕೊಂಡಿತ್ತು. ಈ ಹೆಬ್ಬಾವು ಸಾಮಾನ್ಯ ಹಾವಿನಂತೆ ಇರದೆ ಸಂಪೂರ್ಣ ಬಿಳಿ ಬಣ್ಣದಲ್ಲಿತ್ತು. ಇದರಿಂದಾಗಿ ಮನೆ ಮಂದಿ ಹಾಗೂ ಸ್ಥಳೀಯರು ಗೊಂದಲಕ್ಕೀಡಾದರು.

ನೌಶಾದ್ ಅವರ ಸ್ನೇಹಿತ ಎಂ.ಕೆ.ಆಶೀಪ್ ಎಂಬವರು ಈ ಹಾವಿನ ಬಗ್ಗೆ ಉರಗ ತಜ್ಞ ಸ್ನೇಕ್ ಕಿರಣ್ ಅವರಿಗೆ ಮಾಹಿತಿ ನೀಡಿದ್ದು ಅದರಂತೆ ಸ್ಥಳಕ್ಕೆ ಬಂದ ಸ್ನೇಕ್ ಕಿರಣ್ ಅವರು ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಅರಣ್ಯ ವಲಯ ಅಧಿಕಾರಿ ಶ್ರೀದರ್ ಅವರ ಅದೇಶದಂತೆ ಪಿಲಿಕುಳ ನಿಸರ್ಗಧಾಮಕ್ಕೆ ಒಪ್ಪಿಸಿದ್ದಾರೆ.

ಬಿಳಿ ಬಣ್ಣದ ಉರಗಗಳು ಬಲು ಅಪರೂಪವಾಗಿ ಕಾಣಸಿಗುತ್ತವೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಲ್ಲಿ ಇದು ಎರಡನೇ ಹಾವು ನಮಗೆ ಸಿಕ್ಕಿರುವುದು. ಹೆಚ್ಚು ಕಡಿಮೆ 20 ಸಾವಿರ ಉರಗಗಳ ಜನನದಲ್ಲಿ ಒಂದು ಮಾತ್ರ ಇಂತಹ ಬಿಳಿ ಬಣ್ಣದ  ಹಾವು ಜನನವಾಗುತ್ತದೆ. ಈ ಜೀವಗಳು ಹುಟ್ಟುವಾಗ ಚರ್ಮದ ವರ್ಣದ್ರವ್ಯದ (pigment) ಕೊರತೆಯಿಂದ ಹುಟ್ಟುತ್ತವೆ. ಇದೊಂದು ಕಾಯಿಲೆಯಾಗಿದೆ‌. ಅದರಿಂದ ಇಂತಹ ಜೀವಿಗಳಿಗೆ 'ಆಲ್ಬಿನೊ' (albino) ಎನ್ನುತ್ತಾರೆ.

ಇಂತಹ ಬಿಳಿ ಬಣ್ಣದ ಹಾವು ಹೆಚ್ಚು ಸಮಯ ಬದುಕುವುದಿಲ್ಲ. ಯಾಕೆಂದರೆ ಉಳಿದ ಹಾವುಗಳು ಇದರ ಬಣ್ಣದ ಮೇಲೆ ಆಕರ್ಷಣೆಗೊಳಗಾಗಿ ದಾಳಿ ಮಾಡಿ ತಿಂದು ಬಿಡುತ್ತವೆ. ಆದರೆ ಇಂದು ಸೆರೆಯಾದ ಹಾವು 5 ಅಡಿ ಉದ್ದ ಇದ್ದು ಸುಮಾರು 4ರಿಂದ 5 ವರ್ಷ ಪ್ರಾಯದ್ದಾಗಿದೆ. ಬಿಳಿ ಬಣ್ಣವಿದ್ದು ಈ ಹಾವು ಇಷ್ಟು ದೊಡ್ಡದಾಗಿ ಬೆಳೆದಿರುವುದು ವಿಶೇಷವಾಗಿದೆ ಎಂದು ಸ್ನೇಕ್ ಕಿರಣ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News