ಉಡುಪಿ: ಗುರುವಾರ 92 ಮಂದಿಗೆ ಕೊರೋನ ಸೋಂಕು ದೃಢ; ಸೋಂಕಿತರ ಸಂಖ್ಯೆ 563ಕ್ಕೆ ಏರಿಕೆ

Update: 2020-06-04 14:42 GMT

ಉಡುಪಿ, ಜೂ.4: ಉಡುಪಿ ಜಿಲ್ಲೆಯ ಮಟ್ಟಿಗೆ ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಸೋಂಕಿನ ಏರುಗತಿಯ ಓಟ ಮುಂದುವರೆದಿದೆ. ಗುರುವಾರ ಮುಂಬಯಿ ಬಂದವರಿಂದ ಇನ್ನೂ 92 ಪಾಸಿಟಿವ್ ಪ್ರಕರಣಗಳು ಜಿಲ್ಲೆಯ ಕೊರೋನ ಸೋಂಕಿನ ಪಟ್ಟಿಗೆ ಸೇರ್ಪಡೆಗೊಂಡಿವೆ. ಈ ಮೂಲಕ ಜಿಲ್ಲೆಯ ಸೋಂಕಿತರ ಸಂಖ್ಯೆ ಅಧಿಕೃತವಾಗಿ 563ಕ್ಕೇರಿದೆ.

ಇದರೊಂದಿಗೆ ರಾಜ್ಯ ಆರೋಗ್ಯ ಇಲಾಖೆ ಬಿಡುಗಡೆಗೊಳಿಸಿದ ಕೊರೋನ ಪಾಸಿಟಿವ್ ಪಟ್ಟಿಯಲ್ಲಿ ಉಡುಪಿ ಜಿಲ್ಲೆ, 24 ಗಂಟೆಗಳ ಬಳಿಕ ಮತ್ತದೇ ಅಗ್ರಸ್ಥಾನಕ್ಕೆ ಏರಿ ಕುಳಿತಿದೆ. ನಿನ್ನೆ ಅಗ್ರಸ್ಥಾನದಲ್ಲಿದ್ದ ಕಲುಬುರಗಿ (510) ಎರಡನೇ ಸ್ಥಾನಕ್ಕಿಳಿದರೆ, ಬೆಂಗಳೂರು ನಗರ ಮೂರನೇ (424), ರಾಯಚೂರು ನಾಲ್ಕನೇ (356) ಹಾಗೂ ಮಂಡ್ಯ ಜಿಲ್ಲೆ ಐದನೇ ಸ್ಥಾನ (317)ದಲ್ಲಿವೆ.

ಇಂದು ಸೋಂಕು ಪತ್ತೆಯಾದ 92 ಮಂದಿಯೂ ಮಹಾರಾಷ್ಟ್ರ ಅದರಲ್ಲೂ ಮುಂಬಯಿಯಿಂದ ಬಂದವರಾಗಿದ್ದಾರೆ. ಇವರಲ್ಲಿ 78 ಪುರುಷರು, 13 ಮಹಿಳೆಯರು ಹಾಗೂ ಒಬ್ಬ 10ವರ್ಷದೊಳಗಿನ ಬಾಲಕಿಯಿದ್ದಾರೆ. ಇಂದಿನ 92 ಸೇರಿದಂತೆ ಉಡುಪಿ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 563 ಮಂದಿ ಸೋಂಕು ಪೀಡಿತರು ಪತ್ತೆಯಾಗಿದ್ದು, ಸದ್ಯಕ್ಕೆ 454 ಸಕ್ರಿಯ ಪ್ರಕರಣಗಳಿದ್ದು, ಎಲ್ಲರೂ ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಇಂದು ಸೋಂಕು ಪತ್ತೆಯಾದವರಲ್ಲಿ 61 ಮಂದಿ ಬೈಂದೂರು ತಾಲೂಕಿನವರು. ಉಳಿದಂತೆ ಕಾರ್ಕಳ ತಾಲೂಕಿನ 19, ಕುಂದಾಪುರದ 9, ಉಡುಪಿಯ 1 ಹಾಗೂ ಹೆಬ್ರಿಗೆ ಸೇರಿದ ಇಬ್ಬರಿದ್ದಾರೆ.

24 ಮಂದಿ ಬಿಡುಗಡೆ: ಕೊರೋನ ಪಾಸಿಟಿವ್ ಬಂದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ 24 ಮಂದಿಯನ್ನು ಇಂದು ಬಿಡುಗಡೆಗೊಳಿಸಲಾಗಿದೆ. ಇವರಲ್ಲಿ ಅಧಿಕ ಮಂದಿ ಕುಂದಾಪುರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದವರು. ಈ ಮೂಲಕ ಚಿಕಿತ್ಸೆಯ ಬಳಿಕ ಗುಣಮುಖರಾದ ಸೋಂಕಿತರ ಸಂಖ್ಯೆ ಈಗ 108ಕ್ಕೇರಿದೆ. ಜಿಲ್ಲೆಯಲ್ಲೀಗ 454 ಸಕ್ರಿಯ ಪ್ರಕರಣಗಳಿವೆ. ಒಬ್ಬರು ಮೃತಪಟ್ಟಿದ್ದಾರೆ ಎಂದು ಡಾ.ಸೂಡ ವಿವರಿಸಿದರು.

92 ಪಾಸಿಟಿವ್, 3119 ಸ್ಯಾಂಪಲ್ ನೆಗೆಟಿವ್: ಗುರುವಾರ ಒಟ್ಟು 3211 ಸ್ಯಾಂಪಲ್‌ಗಳ ವರದಿ ಬಂದಿದ್ದು, ಇವುಗಳಲ್ಲಿ 92 ಪಾಸಿಟಿವ್ ಆಗಿದ್ದರೆ, ಉಳಿದ 3119 ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೇವಲ ಏಳು ಮಂದಿಯ ಗಂಟಲು ದ್ರವವನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, ಇವರಲ್ಲಿ ಒಬ್ಬರು ಉಸಿರಾಟ ತೊಂದರೆ ಹಾಗೂ ಆರು ಮಂದಿ ಶೀತಜ್ವರದಿಂದ ಬಳಲುವವರು ಎಂದು ಡಿಎಚ್‌ಓ ತಿಳಿಸಿದರು.

ಈ ಮೂಲಕ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಗಂಟಲುದ್ರವದ ಮಾದರಿಗಳ ಸಂಖ್ಯೆ ಈಗ 12,520ಕ್ಕೇರಿದೆ. ಇವುಗಳಲ್ಲಿ ಗುರುವಾರದವರೆಗೆ ಒಟ್ಟು 10788ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 10,225 ನೆಗೆಟಿವ್ ಆಗಿದ್ದರೆ, ಇಂದಿನ 92 ಸೇರಿ ಒಟ್ಟು 563 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 1732 ಸ್ಯಾಂಪಲ್‌ಗಳ ವರದಿ ಬರಬೇಕಾಗಿದೆ ಎಂದು ಅವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ 9 ಮಂದಿ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ ಆರು ಮಂದಿ ಪುರುಷರು, ಮೂವರು ಮಹಿಳೆಯರಿದ್ದಾರೆ.ಕೊರೋನ ಶಂಕಿತರು ಒಬ್ಬರು, ಉಸಿರಾಟದ ತೊಂದರೆಯ ಆರು ಮಂದಿ ಹಾಗೂ ಶೀತಜ್ವರದವರು ಇಬ್ಬರು ಇದರಲ್ಲಿ ಸೇರಿದ್ದಾರೆ.
ಬುಧವಾರ ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ಇಂದು 14 ಮಂದಿ ಬಿಡುಗಡೆಗೊಂಡಿದ್ದು, 64 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 748 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಗಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 14 ಮಂದಿ ಇಂದು ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5002 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4231 ಮಂದಿ (ಇಂದು 47) 28 ದಿನಗಳ ನಿಗಾವಣೆ ಹಾಗೂ 4820 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗ 98 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 106 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದು, 15 ಮಂದಿ ಆಸ್ಪತ್ರೆ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News