ದ.ಕ. ಜಿಲ್ಲೆಯಲ್ಲಿ ಮತ್ತೆ ನಾಲ್ವರಿಗೆ ಕೊರೋನ ಸೋಂಕು ದೃಢ: ಸೋಂಕಿತರ ಸಂಖ್ಯೆ 143ಕ್ಕೆ ಏರಿಕೆ

Update: 2020-06-04 14:52 GMT
ಸಾಂದರ್ಭಿಕ ಚಿತ್ರ

ಮಂಗಳೂರು, ಜೂ.4: ದ.ಕ. ಜಿಲ್ಲೆಯಲ್ಲಿ ಗುರುವಾರ ಬಂದ 65 ಗಂಟಲ ದ್ರವ ಮಾದರಿ ವರದಿಯ ಪೈಕಿ ನಾಲ್ಕು ಪ್ರಕರಣಗಳು ಪಾಸಿಟಿವ್ ಇದ್ದು, 61 ವರದಿಗಳು ನೆಗೆಟಿವ್ ಬಂದಿವೆ. ಮಹಾರಾಷ್ಟ್ರ ಹಾಗೂ ದುಬೈನಿಂದ ಬಂದಿದ್ದ ನಾಲ್ವರಲ್ಲಿ ಕೊರೋನ ಸೋಂಕು ಇರುವುದು ಖಚಿತವಾಗಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 143ಕ್ಕೇರಿದೆ.

ವೆನ್ಲಾಕ್ ಜಿಲ್ಲಾಸ್ಪತ್ರೆಯಿಂದ ಎರಡು ವರ್ಷದ ಮಗು ಸಹಿತ ಮೂವರು ಗುಣಮುಖರಾಗಿದ್ದಾರೆ. ಇದರಲ್ಲಿ 61 ವರ್ಷದ ವೃದ್ಧ ಕೂಡ ಗುಣಮುಖರಾಗಿರುವುದು ಸಂತಸದಾಯಕವಾಗಿದೆ. ಇಲ್ಲಿಯವರೆಗೆ 76 ಮಂದಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.

ಜೂ.1ರಂದು ದುಬೈನಿಂದ ಆಗಮಿಸಿದ್ದ 28 ವರ್ಷದ ಮಹಿಳೆಯನ್ನು ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇವರನ್ನು ವೆನ್ಲಾಕ್ ಕೊವೀಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮೇ 13ರಂದು ಮುಂಬೈನಿಂದ ಬಂದಿದ್ದ 48, 50, 34 ವರ್ಷದ ಮೂವರು ವ್ಯಕ್ತಿಗಳನ್ನು ಕಾರ್ಕಳದ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಮೂವರು ಕೂಡ ಮೇ 23ರಂದು ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ ಮಂಗಳೂರಿಗೆ ಆಗಮಿಸಿದ್ದರು. ಇವರ ಗಂಟಲು ದ್ರವದ ಮಾದರಿ ಪರೀಕ್ಷೆಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇನ್ನು 150 ವರದಿಗಳು ಬರುವುದು ಬಾಕಿ ಇದೆ. ಆಸ್ಪತ್ರೆಯಲ್ಲಿ ಇನ್ನು 60 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಎಲ್ಲ ರೋಗಿಗಳ ಆರೋಗ್ಯ ಸ್ಥಿತಿ ತೃಪ್ತಿದಾಯಕವಾಗಿದೆ. ಗುರುವಾರ 125 ಸ್ಯಾಂಪಲ್‌ಗಳನ್ನು ಲ್ಯಾಬ್‌ಗೆ ಕಳುಹಿಸಿ ಕೊಡಲಾಗಿದೆ. ಇಲ್ಲಿಯವರೆಗೆ ಏಳು ಮಂದಿ ಮೃತಪಟ್ಟಿದ್ದಾರೆ.

ಕ್ವಾರಂಟೈನ್ ಮುದ್ರೆ ಪರಿಶೀಲಿಸಿ: ಡಿಸಿ
ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆ, ಕಚೇರಿ, ಕಾರ್ಖಾನೆ, ಮಾಲ್, ಧಾರ್ಮಿಕ ಸ್ಥಳ, ಹೊಟೇಲ್‌ಗಳ ಸಿಬ್ಬಂದಿಯು ಎಲ್ಲ ಗ್ರಾಹಕರು ಆವರಣಕ್ಕೆ ಪ್ರವೇಶಿಸುವ ಮೊದಲು ಕ್ವಾರಂಟೈನ್ ಮುದ್ರೆಯನ್ನು ಪರಿಶೀಲಿಸಬೇಕು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಸಂಸ್ಥೆಯವರು ಕ್ವಾರಂಟೈನ್ ಮುದ್ರೆಯನ್ನು ಹೊಂದಿರುವವರನ್ನು ಅವರ ಕ್ವಾರಂಟೈನ್ ಅವಧಿ ಮುಕ್ತಾಯವಾಗುವವರೆಗೂ ಅಥವಾ ಅವರ ಕೊವೀಡ್ ತಪಾಸಣೆಯಲ್ಲಿ ನೆಗೆಟಿವ್ ವರದಿ ಸ್ವೀಕೃತವಾಗುವವರೆಗೂ ಪ್ರವೇಶಿಸಲು ಅವಕಾಶ ನೀಡಬಾರದು. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಪೊಲೀಸರಿಗೆ (100) ಉಲ್ಲಂಘನೆಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News