ಮುಂಬೈಯಿಂದ ಉಡುಪಿಗೆ ಬಂತು ಮೊದಲ ರೈಲು: 145 ಮಂದಿ ಆಗಮನ

Update: 2020-06-04 15:16 GMT
ಸಾಂದರ್ಭಿಕ ಚಿತ್ರ

ಉಡುಪಿ, ಜೂ.4: ರಾಜ್ಯ ಸರಕಾರದ ಅನುಮತಿಯೊಂದಿಗೆ ಮಹಾರಾಷ್ಟ್ರದಾದ್ಯಂತದಿಂದ ಮೇ ಮೊದಲ ವಾರದಲ್ಲಿ ಉಡುಪಿಗೆ ಆಗಮಿಸಿದ 7800ರಷ್ಟು ಮಂದಿ ಹೊತ್ತು ತಂದ ಕೊರೋನ ವೈರಸ್‌ನ್ನು ಎದುರಿಸಲು ಜಿಲ್ಲಾಡಳಿತ ಏದುಸಿರು ಬಿಡುತ್ತಿರುವಂತೆಯೇ ಇಂದು ಬೆಳಗ್ಗೆ ಉಡುಪಿ ಜಿಲ್ಲೆಗೆ ಸೇರಿದ 145 ಮಂದಿಯನ್ನು ಹೊತ್ತು ಮಹಾರಾಷ್ಟ್ರದಿಂದ ಮೊದಲ ರೈಲು ಉಡುಪಿಗೆ ಆಗಮಿಸಿತು.

ಮುಂಬಯಿ ಕುರ್ಲಾದಿಂದ ಕೇರಳದ ತಿರುವನಂತಪುರಂಗೆ ತೆರಳುವ ನಂ.06345 ಲೋಕಮಾನ್ಯ ತಿಲಕ್ ಎಕ್ಸ್‌ಪ್ರೆಸ್ ವಿಶೇಷ ರೈಲು ಇಂದು ಮುಂಜಾನೆ 10:53ಕ್ಕೆ ಸರಿಯಾಗಿ ಇಂದ್ರಾಳಿಯಲ್ಲಿರುವ ಕೊಂಕಣ ರೈಲ್ವೆ ನಿಲ್ದಾಣಕ್ಕೆ ಆಗಮಿಸಿತು. ಇದರಲ್ಲಿ ಒಟ್ಟು 114 ಮಂದಿ ಇಲ್ಲಿ ರೈಲಿನಿಂದ ಇಳಿದಿದ್ದು, ಇವರಲ್ಲಿ 105 ಮಂದಿ ಕಾಪು, ಉಡುಪಿ, ಕಾರ್ಕಳ, ಹೆಬ್ರಿ ಹಾಗೂ ಬ್ರಹ್ಮಾವರಗಳಿಗೆ ತೆರಳಿದರು. ಉಳಿದ 9 ಮಂದಿ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದವರಾಗಿದ್ದು, ತಮ್ಮ ಊರಿಗೆ ತೆರಳಿದರು.

ಉಡುಪಿಗೆ ರೈಲಿನಲ್ಲಿ ಬಂದವರಲ್ಲಿ 50 ಉಡುಪಿಗೆ, 42 ಮಂದಿ ಕಾರ್ಕಳ, 10 ಮಂದಿ ಕಾಪು, ಮೂವರು ಬ್ರಹ್ಮಾವರಕ್ಕೆ ತೆರಳಿದರು. ಇದಕ್ಕೆ ಮುನ್ನ ಕುಂದಾಪುರ ರೈಲು ನಿಲ್ದಾಣದಲ್ಲಿ ಕುಂದಾಪುರದ 31 ಮಂದಿ ಹಾಗೂ ಬೈಂದೂರಿಗೆ ತೆರಳುವ 18 ಮಂದಿ ಇಳಿದಿದ್ದರು. ಕುಂದಾಪುರಕ್ಕೆ ಬಂದವರಲ್ಲಿ ಗೋವಾ ರಾಜ್ಯದಿಂದ ಬಂದ ನಾಲ್ವರಿದ್ದರು.

ಬಂದವರೆಲ್ಲರನ್ನೂ ಥರ್ಮಲ್ ಸ್ಕ್ರೀನಿಂಗ್ ಮೂಲಕ ಉಷ್ಣತೆಯನ್ನು ಪರೀಕ್ಷಿಸಲಾಯಿತು. ಬಳಿಕ ಮುಂಬಯಿಯಿಂದ ಬಂದವರನ್ನು 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಅದು ಮುಗಿದ ಬಳಿಕ 28 ದಿನಗಳ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಯಿತು. ಗೋವಾದಿಂದ ಬಂದವರನ್ನು ನೇರವಾಗಿ ಹೋಮ್ ಕ್ವಾರಂಟೈನ್‌ಗೆ ಕಳುಹಿಸಲಾಯಿತು ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ರೈಲು ನಿಲ್ದಾಣದಲ್ಲಿ ಬಿಗು ಪೊಲೀಸ್ ಬಂದೋಬಸ್ತು ಮಾಡಲಾಗಿದ್ದು, ನೋಡಲ್ ಅಧಿಕಾರಿಗಳ ಮೂಲಕ ಮೂಲಕ ಆಗಮಿಸಿದವರ ನೋಂದಣಿ ಕಾರ್ಯ ನಡೆಯಿತು. ಬಂದವರೆಲ್ಲರ ಕೈಗೆ ಕ್ವಾರಂಟೈನ್ ಸೀಲ್ ಹಾಕಿ ಹೋಟೆಲ್ ಕ್ವಾರಂಟೈನ್‌ಗೆ ಅಧಿಕಾರಿಗಳು ಕಳುಹಿಸಿದರು.

ಉಡುಪಿಯಲ್ಲಿ ಪಾಸಿಟಿವ್ ಪ್ರಕರಣಗಳಲ್ಲಿ ಶೇ.95ಕ್ಕೂ ಅಧಿಕ ಭಾಗ ಮಹಾರಾಷ್ಟ್ರ, ಮುಂಬಯಿಯಿಂದ ಬಂದವರೇ ಆಗಿರುವುದರಿಂದ, ಇದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News