ದೇಶವನ್ನು ವಿಭಜಿಸಲು ಟ್ರಂಪ್ ಯತ್ನ: ಮಾಜಿ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್ ಆರೋಪ

Update: 2020-06-04 16:25 GMT

ವಾಶಿಂಗ್ಟನ್, ಜೂ. 4: ಅಮೆರಿಕದಾದ್ಯಂತ ಅಶಾಂತಿ ನೆಲೆಸಿರುವ ಈ ಸಂದರ್ಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶವನ್ನು ವಿಭಜಿಸಲು ಯತ್ನಿಸುತ್ತಿದ್ದಾರೆ ಹಾಗೂ ಪ್ರಬುದ್ಧ ನಾಯಕತ್ವವನ್ನು ನೀಡುವಲ್ಲಿ ವಿಫಲವಾಗಿದ್ದಾರೆ ಎಂದು ಅವರದೇ ಸರಕಾರದಲ್ಲಿ ರಕ್ಷಣಾ ಕಾರ್ಯದರ್ಶಿಯಾಗಿದ್ದ ಜಿಮ್ ಮ್ಯಾಟಿಸ್ ಬುಧವಾರ ಆರೋಪಿಸಿದ್ದಾರೆ.

ಸಿರಿಯದಿಂದ ಪೂರ್ಣ ಪ್ರಮಾಣದಲ್ಲಿ ಅಮೆರಿಕದ ಸೈನಿಕರನ್ನು ವಾಪಸ್ ಕರೆಸಿಕೊಳ್ಳುವ ಟ್ರಂಪ್‌ರ ನಿರ್ಧಾರವನ್ನು ಪ್ರತಿಭಟಿಸಿ ಮ್ಯಾಟಿಸ್ 2018 ಡಿಸೆಂಬರ್‌ನಲ್ಲಿ ರಕ್ಷಣಾ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ್ದರು. ಪ್ರಸಕ್ತ ದೇಶಾದ್ಯಂತ ನಡೆಯುತ್ತಿರುವ ಜನಾಂಗೀಯ ತಾರತಮ್ಯ ರ್ಯಾಲಿಗಳಿಗೂ ಅವರು ಬೆಂಬಲ ವ್ಯಕ್ತಪಡಿಸಿದ್ದಾರೆ.

“ಅಮೆರಿಕದ ಜನತೆಯನ್ನು ಒಗ್ಗೂಡಿಸಲು ಪ್ರಯತ್ನಗಳನ್ನೇ ಮಾಡದ ಅಧ್ಯಕ್ಷರೊಬ್ಬರನ್ನು ನಾನು ನನ್ನ ಜೀವಮಾನದಲ್ಲಿ ನೋಡುತ್ತಿರುವುದು ಇದೇ ಮೊದಲು. ಅವರು ಪ್ರಯತ್ನಗಳನ್ನು ಮಾಡುತ್ತಿರುವಂತೆ ಕನಿಷ್ಠ ನಟನೆಯನ್ನೂ ಮಾಡುತ್ತಿಲ್ಲ” ಎಂದು ದ ಅಟ್ಲಾಂಟಿಕ್‌ನಲ್ಲಿ ಪ್ರಕಟಗೊಂಡಿರುವ ಕಟು ಹೇಳಿಕೆಯೊಂದರಲ್ಲಿ ಮ್ಯಾಟಿಸ್ ಹೇಳಿದ್ದಾರೆ.

“ಇದಕ್ಕೆ ಬದಲಾಗಿ ಅವರು ನಮ್ಮನ್ನು ವಿಭಜಿಸಲು ಪ್ರಯತ್ನಿಸುತ್ತಿದ್ದಾರೆ” ಎಂದು ನಿವೃತ್ತ ಮರೀನ್ ಜನರಲ್ ಕೂಡ ಆಗಿರುವ ಮ್ಯಾಟಿಸ್ ನುಡಿದರು. ಹಾಲಿ ಅಧ್ಯಕ್ಷರೊಬ್ಬರನ್ನು ಟೀಕಿಸುವುದು ನನಗೆ ಸರಿ ಕಾಣಿಸುವುದಿಲ್ಲ ಎಂಬುದಾಗಿ ಅವರು ಈ ಹಿಂದೆ ಹೇಳಿದ್ದರು.

ಪ್ರಬುದ್ಧ ನಾಯಕತ್ವವಿಲ್ಲದ ಮೂರು ವರ್ಷಗಳ ಪರಿಣಾಮಗಳನ್ನು ನಾವು ಇಂದು ನೋಡುತ್ತಿದ್ದೇವೆ ಎಂದರು.

ದೇಶಾದ್ಯಂತ ತಲೆಯೆತ್ತಿರುವ ಜನಾಂಗೀಯ ಅಶಾಂತಿಯ ನಡುವೆಯೇ, ಸೋಮವಾರ ಡೊನಾಲ್ಡ್ ಟ್ರಂಪ್ ತನ್ನನ್ನು ತಾನು ಕಾನೂನು ಮತ್ತು ಸುವ್ಯವಸ್ಥೆಯ ಅಧ್ಯಕ್ಷ ಎಂಬುದಾಗಿ ಘೋಷಿಸಿಕೊಂಡರು ಹಾಗೂ ಹೆಚ್ಚುತ್ತಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಅಮೆರಿಕದ ನಗರಗಳಲ್ಲಿ ಸೇನೆಯನ್ನು ನಿಯೋಜಿಸುವ ಬೆದರಿಕೆಯನ್ನು ಒಡ್ಡಿದರು.

ಟ್ರಂಪ್‌ರಿಂದ ಸಂವಿಧಾನದ ಉಲ್ಲಂಘನೆ

“ಸುಮಾರು 50 ವರ್ಷಗಳ ಹಿಂದೆ ನಾನು ಸೇನೆ ಸೇರಿದಾಗ, ಸಂವಿಧಾನವನ್ನು ಬೆಂಬಲಿಸುವ ಮತ್ತು ರಕ್ಷಿಸುವ ಪ್ರತಿಜ್ಞೆಯನ್ನು ನಾನು ಕೈಗೊಂಡಿದ್ದೆ ಎಂದು” ಜಿಮ್ ಮ್ಯಾಟಿಸ್ ಹೇಳಿದ್ದಾರೆ.

ಅದೇ ಪ್ರತಿಜ್ಞೆಯನ್ನು ಸ್ವೀಕರಿಸಿದ ಸೈನಿಕರಿಗೆ ತಮ್ಮದೇ ಸಹ ನಾಗರಿಕರ ಸಾಂವಿಧಾನಿಕ ಹಕ್ಕುಗಳನ್ನು ಹತ್ತಿಕ್ಕುವಂತೆ ಯಾವುದೇ ಸಂದರ್ಭದಲ್ಲಾದರೂ ಆದೇಶ ನೀಡಬಹುದು ಎನ್ನುವುದನ್ನು ನಾನು ಕನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಅತ್ಯಂತ ವೈಭವೀಕೃತ ಜನರಲ್!

ತನ್ನನ್ನು ಟೀಕಿಸಿರುವ ಮಾಜಿ ರಕ್ಷಣಾ ಕಾರ್ಯದರ್ಶಿ ಜಿಮ್ ಮ್ಯಾಟಿಸ್‌ಗೆ ತೀರುಗೇಟು ನೀಡಿರುವ ಡೊನಾಲ್ಡ್ ಟ್ರಂಪ್, ಅವರೊಬ್ಬರು ಅತ್ಯಂತ ವೈಭವೀಕೃತ ಜನರಲ್ (ಸೇನಾಧಿಕಾರಿ) ಆಗಿದ್ದಾರೆ ಎಂದು ಹೇಳಿದ್ದಾರೆ.

ಬಹುಷಃ ಬರಾಕ್ ಒಬಾಮ ಮತ್ತು ನನ್ನ ನಡುವಿನ ಏಕೈಕ ಸಾಮ್ಯತೆಯೆಂದರೆ, ಜಗತ್ತಿನ ಅತ್ಯಂತ ವೈಭವೀಕೃತ ಜನರಲ್ ಆಗಿರುವ ಮ್ಯಾಟಿಸ್‌ರನ್ನು ಉಚ್ಚಾಟಿಸಿದ ಗೌರವವನ್ನು ನಾವಿಬ್ಬರೂ ಹೊಂದಿದ್ದೇವೆ. ನಾನು ಅವರ ರಾಜೀನಾಮೆಯನ್ನು ಕೇಳಿ ಪಡೆದೆ. ಅದಕ್ಕಾಗಿ ನನಗೆ ಹೆಮ್ಮೆಯೆನಿಸುತ್ತಿದೆ ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News