ಉಪ್ಪಿನಂಗಡಿ: ಅನಧಿಕೃತ ಮೀನು ಮಾರಾಟ ತೆರವು; ಕಾರ್ಯಾಚರಣೆ ಸಂದರ್ಭ ಮಾತಿನ ಚಕಮಕಿ

Update: 2020-06-04 17:10 GMT

ಉಪ್ಪಿನಂಗಡಿ: ಇಲ್ಲಿನ ಗಾಂಧಿಪಾರ್ಕ್‌ನ ರಾಷ್ಟ್ರೀಯ ಹೆದ್ದಾರಿ ಬದಿ ಅನಧಿಕೃತವಾಗಿ ಟೆಂಪೋದಲ್ಲಿ ಮೀನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ತೆರಳಿದ ಉಪ್ಪಿನಂಗಡಿ ಗ್ರಾ.ಪಂ. ಪಿಡಿಒ ಸಿನಿಮೀಯ ಶೈಲಿಯಲ್ಲಿ ಕಾರ್ಯಾಚರಣೆ ನಡೆಸಿ, ತೆರವುಗೊಳಿಸಿದ ಘಟನೆ ನಡೆದಿದೆ.

ಇಲ್ಲಿನ ಗಾಂಧಿಪಾರ್ಕ್ ಬಳಿ ಕೆಲವು ಯುವಕರು ಮಿನಿ ಗೂಡ್ಸ್ ಟೆಂಪೋವೊಂದರಲ್ಲಿ ಕಳೆದ ಮೂರು ದಿನಗಳಿಂದ ಮೀನು ಮಾರಾಟಕ್ಕೆ ತೊಡಗಿದ್ದರು. ಗುರುವಾರ ಏಕಾಏಕಿ ಕಾರಿನಲ್ಲಿ ಬಂದ ಉಪ್ಪಿನಂಗಡಿ ಪಿಡಿಒ ಮೀನು ಮಾರಾಟದ ಗೂಡ್ಸ್ ಟೆಂಪೋದ ಅನಧಿಕೃತ ಮಾರಾಟಕ್ಕೆ ತಡೆ ಹಾಕಿದಾಗ ವ್ಯಾಪಾರಸ್ಥರು ಮತ್ತು ಸರಕಾರಿ ಸಿಬ್ಬಂದಿ ನಡುವೆ ಮಾತಿನ ಚಕಮಕಿ ನಡೆಯಿತು. ಇದೇ ಸಂದರ್ಭದಲ್ಲಿ ಕರ್ತವ್ಯದಲ್ಲಿರುವ ಪಿಡಿಒಗೆ ಯುವಕರು ಅವಾಚ್ಯ ಶಬ್ದದಲ್ಲಿ ನಿಂದಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಸ್ ಆಗಿದೆ.

ಪರಿಸ್ಥಿತಿ ಉದ್ವಿಗ್ನತೆಗೆ ಒಳಗಾಗುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಗುಂಪನ್ನು ಚುದುರಿಸಿ ಯಾರು ಯಾವುದೇ ಕೆಲಸ ಮಾಡುವುದಿದ್ದಲ್ಲಿ ಕಾನೂನು ಬದ್ಧವಾಗಿಯೇ ಮಾಡಬೇಕೆಂದು ಎಚ್ಚರಿಕೆ ನೀಡಿದರು.

ಬಳಿಕ ಗ್ರಾ.ಪಂ.ನಲ್ಲಿ ಈ ಬಗ್ಗೆ ಮಾತುಕತೆ ನಡೆಯಿತು. ಉಪ್ಪಿನಂಗಡಿಯಲ್ಲಿ ಈಗಾಗಲೇ ಪಂಚಾಯತ್ ವತಿಯಿಂದಲೇ ಮೀನು ಮಾರುಕಟ್ಟೆ ಚಾಲ್ತಿಯಲ್ಲಿರುವುದರಿಂದ ಅನಧಿಕೃತ ಮೀನು ಮಾರಾಟಕ್ಕೆ ಅವಕಾಶವಿಲ್ಲ ಎನ್ನುವುದು ಪಂಚಾಯತ್ ಆಡಳಿತದ ವಾದವಾಗಿತ್ತು. ಕೊನೆಗೆ ಉಪ್ಪಿನಂಗಡಿ ಪೇಟೆಯಲ್ಲಿ ಗ್ರಾ.ಪಂ. ವತಿಯಿಂದ ಮೀನು ಮಾರುಕಟ್ಟೆ ಚಾಲ್ತಿಯಿರುವುದರಿಂದ ವಾರ್ಡ್ ನಂಬರ್ 1ರಲ್ಲಿ ಅನಧಿಕೃತವಾಗಿ ಮೀನು ವ್ಯಾಪಾರಕ್ಕೆ ಅವಕಾಶವಿಲ್ಲ ಎಂದು ಗ್ರಾ.ಪಂ. ಸೂಚನೆ ನೀಡಿತು.

ಅನಧಿಕೃತ ಅಂಗಡಿಗಳಿಗೆ ಅವಕಾಶ ನೀಡಬಾರದೆಂದು ಉಪ್ಪಿನಂಗಡಿ ಗ್ರಾ.ಪಂ.ನ ಕಳೆದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಅದರ ಅನುಷ್ಠಾನಕ್ಕೆ ತಾನು ಮುಂದಾಗಿದ್ದೆ. ಪ್ರಮುಖವಾಗಿ ಸ್ವಚ್ಛತೆಗೆ ಆದ್ಯತೆ ನೀಡಿ ಹಾಗೂ ಇಲ್ಲಿ ಮೀನು ಮಾರುಕಟ್ಟೆ ಟೆಂಡರ್ ಕೊಡಲಾಗಿದೆ ಎಂಬ ಕಾರಣದಿಂದ ಮೊದಲಾಗಿ ಮೀನಿನ ಅಂಗಡಿ ತೆರವಿಗೆ ನಾನು ಮುಂದಾದೆ. ತಾನು ಹೊಸದಾಗಿ ಇಲ್ಲಿಗೆ ಬಂದಿರುವುದರಿಂದ ಈ ಹಿಂದೆಯೂ ಅನಧಿಕೃತ ಅಂಗಡಿಗಳ ತೆರವಿಗೆ ಮಾಡಲಾದ ನಿರ್ಣಯ ಅನುಷ್ಠಾನವಾಗಿದೆಯೋ ಇಲ್ಲವೋ ಗೊತ್ತಿಲ್ಲ. ಈ ನಿರ್ಣಯಗಳನ್ನೆಲ್ಲಾ ನಾನು ಅನುಷ್ಠಾನಕ್ಕೆ ತರುತ್ತೇನೆ. ಅನಧಿಕೃತ ಅಂಗಡಿಗಳ ಬಗ್ಗೆ ಯಾವುದೇ ರಾಜಕೀಯ ಬರಬಾರದು. ಸಮಾನವಾಗಿ ಎಲ್ಲರಿಗೂ ನ್ಯಾಯ ಕಲ್ಪಿಸಬೇಕು. ಆದ್ದರಿಂದ ಎಲ್ಲಿಯೂ ಅನಧಿಕೃತ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ. ಪ್ರತಿಯೊಂದು ಅನಧಿಕೃತ ಅಂಗಡಿಗಳನ್ನೂ ಹಂತಹಂತವಾಗಿ ತೆಗೆಯುವ ಕಾರ್ಯ ಮಾಡುತ್ತೇನೆ.

-ವಿಲ್ಫ್ರೆಡ್ ಲಾರೆನ್ಸ್ ರೊಡ್ರಿಗಸ್
ಅಭಿವೃದ್ಧಿ ಅಧಿಕಾರಿ, ಉಪ್ಪಿನಂಗಡಿ ಗ್ರಾ.ಪಂ.


ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಅನಧಿಕೃತ ಅಂಗಡಿಗಳು ಸಾಕಷ್ಟಿವೆ. ಇವುಗಳಿಂದ ತೊಂದರೆಗಳಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಹಲವು ದೂರುಗಳು ನನ್ನಲ್ಲಿಗೆ ಬಂದಿದೆ. ಆದ್ದರಿಂದ ಅನಧಿಕೃತ ಎಲ್ಲಾ ಅಂಗಡಿಗಳನ್ನು ತೆರವುಗೊಳಿಸಲು ಸೂಚಿಸುವಂತೆ ನಾನು ಈಗಾಗಲೇ ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಅನಧಿಕೃತ ಅಂಗಡಿಗಳ ತೆರವಿನಲ್ಲಿ ಯಾವುದೇ ಧರ್ಮ ಬೇಧ, ರಾಜಕೀಯ ಬೇಧ ಇರಬಾರದು. ಎಲ್ಲರಿಗೂ ಸಮಾನ ನ್ಯಾಯ ಒದಗಬೇಕು.
- ಸಂಜೀವ ಮಠಂದೂರು
ಶಾಸಕರು, ಪುತ್ತೂರು ವಿಧಾನಸಭಾ ಕ್ಷೇತ್ರ

.........................

ಕಾನೂನು ಎಲ್ಲರಿಗೂ ಒಂದೇ ಇರಬೇಕು. ಧರ್ಮ, ರಾಜಕೀಯ ಬೇಧವನ್ನು ನಾವು ಒಪ್ಪುವುದಿಲ್ಲ. ಉಪ್ಪಿನಂಗಡಿಯ ಗ್ರಾ.ಪಂ.ನಲ್ಲಿ ಧರ್ಮಾಧಾರಿತ ರಾಜಕೀಯ ನಡೆಯುತ್ತಿದ್ದು, ಇದು ಮುಂದುವರಿದಲ್ಲಿ ಸಂಘಟನೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ. ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸುವುದಿದ್ದಲ್ಲಿ ನಿರ್ದಿಷ್ಟ ಸಮುದಾಯವನ್ನು ನೋಡದೇ ಎಲ್ಲಾ ಅನಧಿಕೃತ ಅಂಗಡಿಗಳನ್ನು ತೆರವುಗೊಳಿಸಬೇಕು.
- ಸಂದೀಪ್ ಕುಪ್ಪೆಟ್ಟಿ
ಅಧ್ಯಕ್ಷರು, ವಿಶ್ವಹಿಂದೂ ಪರಿಷತ್ ಉಪ್ಪಿನಂಗಡಿ ಘಟಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News