ಗರ್ಭಿಣಿ ಸಫೂರಾ ಝರ್ಗರ್ ಜಾಮೀನು ಅರ್ಜಿಯನ್ನು ಮೂರನೇ ಬಾರಿ ತಿರಸ್ಕರಿಸಿದ ಕೋರ್ಟ್

Update: 2020-06-05 09:46 GMT

ಹೊಸದಿಲ್ಲಿ: ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಪ್ರತಿಭಟನೆ ಸಂದರ್ಭ ನಡೆದ ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿದ್ಯಾರ್ಥಿನಿ, ಗರ್ಭಿಣಿಯಾಗಿರುವ ಸಫೂರಾ ಝರ್ಗರ್ ಅವರಿಗೆ ಜಾಮೀನು ನೀಡಲು ಪಟಿಯಾಲ ಹೌಸ್ ನ್ಯಾಯಾಲಯ ಮತ್ತೊಮ್ಮೆ ನಿರಾಕರಿಸಿದೆ. ಝರ್ಗರ್ ಅವರು ಜಾಮಿಯಾ ಸಮನ್ವಯ ಸಮಿತಿಯ ಮಾಧ್ಯಮ ಸಂಚಾಲಕಿಯಾಗಿದ್ದರು.

ಆಕೆಯ ವಿರುದ್ಧ ಕಠಿಣ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆಯನ್ನು ಹೇರಲಾಗಿದೆ. ಆಕೆ ಫೆಬ್ರವರಿ 23ರಂದು ಮಾಡಿದ ‘ಪ್ರಚೋದನಕಾರಿ ಭಾಷಣ’ ಈಶಾನ್ಯ ದಿಲ್ಲಿಯಲ್ಲಿ ಹಿಂಸೆಗೆ ಕಾರಣವಾಯಿತು ಎಂದು ಪ್ರಾಸಿಕ್ಯೂಶನ್ ಆರೋಪಿಸಿದೆ.

ಇದು ಝರ್ಗರ್ ಅವರ ಮೂರನೇ ಜಾಮೀನು ಅರ್ಜಿಯಾಗಿದೆ. ಆಕೆಯ ವಿರುದ್ಧ ಕಾನೂನುಬಾಹಿರ ಚಟುವಟಿಕೆ ನಿಯಂತ್ರಣ ಕಾಯಿದೆ ಹೇರುವ ಮುನ್ನ ಎಪ್ರಿಲ್ 18ರಂದು  ಆಕೆಯ ವಕೀಲರು ಮೊದಲ ಬಾರಿ ಜಾಮೀನು ಅರ್ಜಿ ಸಲ್ಲಿಸಿದ್ದರೂ ಎಪ್ರಿಲ್ 21ರಂದು ನ್ಯಾಯಾಲಯ ಅದನ್ನು ತಿರಸ್ಕರಿಸಿತ್ತು. ಮೇ 2ರಂದು ಎರಡನೇ ಬಾರಿ ಸಲ್ಲಿಸಿದ ಜಾಮೀನು ಅರ್ಜಿಯೂ ತಿರಸ್ಕೃತಗೊಂಡಿತ್ತು.

“ನೀವು ಕೆಂಡದ ಜತೆ ಆಟವಾಡಲು ನಿರ್ಧರಿಸಿದಾಗ ಗಾಳಿಯಿಂದಾಗಿ ಬೆಂಕಿಯ ಕಿಡಿ ಸ್ವಲ್ಪ ದೂರ ಹಾರಿ ಬೆಂಕಿ ಹರಡಿತು ಎಂದು  ನೀವು ದೂರುವಂತಿಲ್ಲ'' ಎಂದು ಗುರುವಾರ ಆಕೆಯ ಜಾಮೀನು ಅರ್ಜಿ ತಿರಸ್ಕರಿಸುವ ವೇಳೆ ಹೆಚ್ಚುವರಿ ಸೆಶನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಹೇಳಿದರು.

ಝರ್ಗರ್ ಅವರಿಗೆ ಸೂಕ್ತ ವೈದ್ಯಕೀಯ ಸವಲತ್ತು ಒದಗಿಸುವಂತೆ ನ್ಯಾಯಾಲಯ ತಿಹಾರ್ ಜೈಲಿನ ಮೆಡಿಕಲ್ ಸುಪರಿಂಟೆಂಡೆಂಟ್ ಅವರಿಗೆ ಸೂಚಿಸಿದೆ. “ಈಗಿನ ಕೋವಿಡ್-19 ಪರಿಸ್ಥಿತಿಯಿಂದಾಗಿ ಆಕೆಯ ಪರಿಸ್ಥಿತಿ ಹೆಚ್ಚು ನಾಜೂಕಾಗಿದೆ ಎಂದು ಒಪ್ಪಿಕೊಳ್ಳಬೇಕಾಗಿದೆ'' ಎಂದು 21 ವಾರಗಳ ಗರ್ಭಿಣಿಯಾಗಿರುವ ಆಕೆಯ ಬಗ್ಗೆ ನ್ಯಾಯಾಲಯ ತನ್ನ ಆದೇಶದಲ್ಲಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News