ಅಮೆರಿಕ ನೌಕಾಪಡೆ ಅಧಿಕಾರಿಯನ್ನು ಬಿಡುಗಡೆಗೊಳಿಸಿದ ಇರಾನ್

Update: 2020-06-05 16:46 GMT

ವಾಶಿಂಗ್ಟನ್, ಜೂ. 5: ಅಮೆರಿಕದ ನೌಕಾಪಡೆ ಅಧಿಕಾರಿಯೊಬ್ಬರನ್ನು ಇರಾನ್ ಹಾಗೂ ಇಬ್ಬರು ಇರಾನಿಯನ್ನರನ್ನು ಅಮೆರಿಕ ಪರಸ್ಪರ ಬಿಡುಗಡೆಗೊಳಿಸಿದ ಬಳಿಕ, ಬದ್ಧ ವೈರಿ ಇರಾನ್ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಸಾಧ್ಯವಿದೆ ಎಂಬ ಇಂಗಿತವನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವ್ಯಕ್ತಪಡಿಸಿದ್ದಾರೆ.

ಇರಾನ್‌ನ ಬಂಧನದಲ್ಲಿದ್ದ ಮೈಕಲ್ ವೈಟ್ ಟೆಹರಾನ್‌ನಿಂದ ಸ್ವಿಟ್ಸರ್‌ಲ್ಯಾಂಡ್‌ನ ಸೇನಾ ವಿಮಾನವೊಂದರಲ್ಲಿ ಝೂರಿಕ್‌ಗೆ ಪ್ರಯಾಣಿಸಿದರು. ಝೂರಿಕ್‌ನಲ್ಲಿ ಅವರನ್ನು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಸ್ವಾಗತಿಸಿದರು.

ಇರಾನ್‌ನಲ್ಲಿ ಇರುವ ವೇಳೆ, ಮೈಕಲ್ ವೈಟ್‌ಗೆ ಕೊರೋನ ಸೋಂಕು ತಗಲಿತ್ತು ಹಾಗೂ ಬಳಿಕ ಅವರು ಸಾಂಕ್ರಾಮಿಕದಿಂದ ಚೇತರಿಸಿಕೊಂಡಿದ್ದಾರೆ.

ನಾನು ವೈಟ್ ಜೊತೆ ಟೆಲಿಫೋನ್‌ನಲ್ಲಿ ಮಾತನಾಡಿದ್ದೇನೆ ಎಂದು ಹೇಳಿದ ಟ್ರಂಪ್, ಇರಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಲವು ತಿಂಗಳ ಹಿಂದೆ ಈ ಎರಡು ದೇಶಗಳು ಯುದ್ಧಕ್ಕೆ ತೊಡೆತಟ್ಟಿ ನಿಂತಿದ್ದವು.

ಇರಾನ್‌ಗೆ ಧನ್ಯವಾದಗಳು, ಉಭಯ ದೇಶಗಳ ನಡುವೆ ಒಪ್ಪಂದ ಸಾಧ್ಯವೆನ್ನುವುದನ್ನು ಇದು ತೋರಿಸಿದೆ ಎಂದು ಟ್ರಂಪ್ ಗುರುವಾರ ಟ್ವಿಟರ್‌ನಲ್ಲಿ ಹೇಳಿದ್ದಾರೆ.

ವೈಟ್ ಅಮೆರಿಕಕ್ಕೆ ಆಗಮಿಸುತ್ತಿರುವಂತೆಯೇ, ಅಮೆರಿಕದಲ್ಲಿ ಬಂಧನದಲ್ಲಿರುವ ಇರಾನಿಯನ್ ಅಮೆರಿಕನ್ ವೈದ್ಯ ಮಜೀದ್ ತಹೇರಿ ಅವರಿಗೆ ಇರಾನ್‌ನಲ್ಲಿರುವ ತನ್ನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗುವಂತೆ ಬಿಡುಗಡೆ ಮಾಡುವಂತೆ ಫೆಡರಲ್ ನ್ಯಾಯಾಧೀಶರೊಬ್ಬರು ಆದೇಶ ಹೊರಡಿಸಿದ್ದಾರೆ.

ಇದಕ್ಕೂ ಒಂದು ದಿನ ಮೊದಲು, 2016ರಲ್ಲಿ ಅಮೆರಿಕದಲ್ಲಿ ಬಂಧನಕ್ಕೊಳಗಾಗಿದ್ದ ಇರಾನಿಯನ್ ವಿಜ್ಞಾನಿ ಸೈರಸ್ ಅಸ್ಗರಿ ಇರಾನ್‌ಗೆ ಮರಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News