ಐಪಿಎಲ್ ಆಡುತ್ತಿದ್ದಾಗ ಜನಾಂಗೀಯ ನಿಂದನೆ ಎದುರಿಸಿದ್ದೆ ಎಂದ ಡರೆನ್ ಸಮ್ಮಿ

Update: 2020-06-07 08:28 GMT

ಕಿಂಗ್‌ಸ್ಟನ್, ಜೂ.7: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ(ಐಪಿಎಲ್)ಸನ್‌ರೈಸರ್ಸ್ ಹೈದರಾಬಾದ್ ಫ್ರಾಂಚೈಸಿ ಪರ ಆಡುವಾಗ ನಾನು ಜನಾಂಗೀಯ ನಿಂದನೆ ಎದುರಿಸಿದ್ದೆ ಎಂದು ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಡರೆನ್ ಸಮ್ಮಿ ಹೇಳಿದ್ದಾರೆ.

ಅಮೆರಿಕದಲ್ಲಿ ಆಫ್ರಿಕನ್-ಅಮೆರಿಕನ್ ಜಾರ್ಜ್ ಫ್ಲಾಯ್ಡಾ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ವಿಶ್ವದಾದ್ಯಂತ 'ಬ್ಲಾಕ್ ಲೈವ್ಸ್ ಸಪೋರ್ಟ್' ಅಭಿಯಾನ ಆರಂಭಿಸಲಾಗಿದ್ದು, ಇದೇ ಸಮಯದಲ್ಲಿ ಸಮ್ಮಿ ಈ ಆರೋಪ ಮಾಡಿದ್ದಾರೆ.

"ನಾನು ಐಪಿಎಲ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಪರವಾಗಿ ಆಡುತ್ತಿದ್ದಾಗ 'ಕಾಲಿಯಾ' ಶಬ್ದದ ಅರ್ಥವೇನೆಂದು ತಿಳಿದುಕೊಂಡಿದ್ದೆ. ಅವರು ನನ್ನನ್ನು ಹಾಗೂ ಶ್ರೀಲಂಕಾದ ಪೆರೇರರನ್ನು ಆ ಹೆಸರಿನಿಂದ ಕರೆಯುತ್ತಿದ್ದರು. ಅವರು ನನ್ನನ್ನು ಬಲಿಷ್ಠ ಕರಿಯ ವ್ಯಕ್ತಿ ಎಂದು ಕರೆದಿರಬಹುದು ಎಂದು ಭಾವಿಸಿದ್ದೆ'' ಎನ್ನುವುದಾಗಿ ಇನ್‌ಸ್ಟಾಗ್ರಾಮ್ ಪೇಜ್‌ನಲ್ಲಿ ಶನಿವಾರ ಸಮ್ಮಿ ಬರೆದಿದ್ದಾರೆ.

  ತಾನು ಯಾವಾಗ ಹಾಗೂ ಯಾರಿಂದ ಇಂತಹ ನಿಂದನೆ ಎದುರಿಸಿದ್ದೆ ಎಂದು ಸಮ್ಮಿ ಸ್ಪಷ್ಟವಾಗಿ ಹೇಳಿಲ್ಲ. ಜಂಟಲ್‌ಮ್ಯಾನ್ ಗೇಮ್ ಕ್ರಿಕೆಟ್‌ನಲ್ಲಿ ಚಾಯ್ತಿಯಲ್ಲಿರುವ ಜನಾಂಗೀಯ ನಿಂದನೆಯ ವಿರುದ್ಧ ಐಸಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.

ವೆಸ್ಟ್‌ಇಂಡೀಸ್ ಎರಡು ಬಾರಿ ಟ್ವೆಂಟಿ-20 ವಿಶ್ವಕಪ್ ಗೆಲ್ಲಲು ತಂಡದ ನಾಯಕತ್ವವಹಿಸಿದ್ದ ಸಮ್ಮಿ ತನ್ನ ದೇಶದ ಪರ 38 ಟೆಸ್ಟ್, 126 ಏಕದಿನ ಹಾಗೂ 68 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News