×
Ad

​ಉಡುಪಿ: ರವಿವಾರ ಕೊರೋನ ಸೋಂಕಿತರು 13 ಮಂದಿ

Update: 2020-06-07 19:35 IST

ಉಡುಪಿ, ಜೂ.7: ಸತತ ನಾಲ್ಕು ದಿನಗಳ ಮಹಾಸ್ಫೋಟದ ಬಳಿಕ ಉಡುಪಿ ಜಿಲ್ಲೆಯಲ್ಲಿ ನೋವೆಲ್ ಕೊರೋನ ವೈರಸ್‌ನ (ಕೋವಿಡ್-19) ಸೋಂಕಿತರ ಸಂಖ್ಯೆ ರವಿವಾರ ತಾತ್ಕಾಲಿಕವಾಗಿ ತಗ್ಗಿದೆ. ಇಂದು ಒಟ್ಟು 13 ಮಂದಿ ಮಾತ್ರ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ. ಇಂದು ಸಂಜೆಯ ವರೆಗೆ ಒಟ್ಟು 901 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಹೀಗಾಗಿ ಉಡುಪಿ ಈಗಲೂ ರಾಜ್ಯದಲ್ಲಿ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ಜೂ.1ರಂದು ಉಡುಪಿಯಲ್ಲಿ 73 ಪಾಸಿಟಿವ್ ಪ್ರಕರಣಗಳು ಕಂಡುಬಂದ ಬಳಿಕ ಅತೀ ಕಡಿಮೆ 13ಸೋಂಕಿತರು ಕಂಡುಬಂದಿರುವುದು ಇಂದೇ ಆಗಿದೆ. ಜೂ. 2ರಂದು 150, ಜೂ.3ರಂದು 61, ಜೂ.4ರಂದು 92, ಜೂ.5ರಂದು 204 ಹಾಗೂ ಜೂ.6ರಂದು 121 ಪಾಸಿಟಿವ್ ಪ್ರಕರಣಗಳು ಉಡುಪಿಯಲ್ಲಿ ವರದಿಯಾಗಿದ್ದು, ಜಿಲ್ಲೆಯಲ್ಲೀಗ ಒಟ್ಟು 901 ಪ್ರಕರಣಗಳಿವೆ.

ಉಡುಪಿಯ ನಂತರದ ಸ್ಥಾನದಲ್ಲಿರುವ ಕಲಬುರಗಿಯಲ್ಲಿ ಇಂದು ರಾಜ್ಯದಲ್ಲೇ ಅತ್ಯಧಿಕ ಅಂದರೆ 39 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಒಟ್ಟು 660 ಸೋಂಕಿತರನ್ನು ಹೊಂದಿ ಎರಡನೇ ಸ್ಥಾನದಲ್ಲಿದೆ. ಯಾದಗಿರಿ 515, ಬೆಂಗಳೂರುನಗರ 475 ಪಾಸಿಟಿವ್ ಪ್ರಕರಣೊಂದಿಗೆ ನಂತರದ ಸ್ಥಾನಗಳಲ್ಲಿವೆ.

ಜಿಲ್ಲೆಯಲ್ಲಿ ಇಂದು ಸೋಂಕು ಪತ್ತೆಯಾದ 13 ಮಂದಿಯಲ್ಲಿ ಏಳು ಮಂದಿ ಪುರುಷರು, ಐವರು ಮಹಿಳೆಯರು ಹಾಗೂ ಒಬ್ಬ 7 ವರ್ಷದ ಬಾಲಕ ಸೇರಿದ್ದಾರೆ. ಇವರಲ್ಲಿ 12 ಮಂದಿ ಮಹಾರಾಷ್ಟ್ರ- ಮುಂಬೈಯಿಂದ ಬಂದವ ರಾದರೆ, 30 ವರ್ಷ ಪ್ರಾಯದ ಮಹಿಳೆಯೊಬ್ಬರು ಗುಜರಾತ್‌ನಿಂದ ಬಂದವರಾ ಗಿದ್ದಾರೆ ಎಂದು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ರವಿವಾರ 41 ಮಂದಿ ಬಿಡುಗಡೆ:  ಕೊರೋನ ಪಾಸಿಟಿವ್ ಬಳಿಕ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದ ಕುಂದಾಪುರದ ನಾಲ್ವರು ಸೇರಿದಂತೆ ಒಟ್ಟು 41 ಮಂದಿಯನ್ನು ರವಿವಾರ ಬಿಡುಗಡೆಗೊಳಿಸಲಾಯಿತು. ಈ ಮೂಲಕ ಚಿಕಿತ್ಸೆಯ ಬಳಿಕ ಗುಣಮುಖರಾದ ಸೋಂಕಿತರ ಸಂಖ್ಯೆ ಈಗ 274ಕ್ಕೇರಿದೆ. ಜಿಲ್ಲೆಯಲ್ಲೀಗ 626 ಸಕ್ರೀಯ ಪ್ರಕರಣ ಗಳಿವೆ ಎಂದು ಡಾ.ಸೂಡ ಹೇಳಿದರು.

ರವಿವಾರ ಪಾಸಿಟಿವ್ ಕಂಡುಬಂದವರಲ್ಲಿ ಮೂವರು ಉಡುಪಿ ತಾಲೂಕಿ ನವರು ಹಾಗೂ ಉಳಿದ 10 ಮಂದಿ ಕುಂದಾಪುರ ತಾಲೂಕಿನವರು ಎಂದು ಅವರು ವಿವರಿಸಿದರು.

155 ಸ್ಯಾಂಪಲ್ ನೆಗೆಟಿವ್: ರವಿವಾರ ಜಿಲ್ಲೆಯಲ್ಲಿ ಒಟ್ಟು 168 ಸ್ಯಾಂಪಲ್ ಗಳ ವರದಿ ಬಂದಿವೆ. ಇವುಗಳಲ್ಲಿ 13 ಮಾತ್ರ ಪಾಸಿಟಿವ್ ಆಗಿದ್ದರೆ, ಉಳಿದ 155 ಸೋಂಕಿಗೆ ನೆಗೆಟಿವ್ ಆಗಿವೆ. ಇಂದು ಕೋವಿಡ್-19 ರೋಗದ ಗುಣ ಲಕ್ಷಣವಿರುವ 10 ಮಂದಿಯ ಗಂಟಲು ದ್ರವದ ಮಾದರಿ ಯನ್ನು ಪರೀಕ್ಷೆಗಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಇವರಲ್ಲಿ ಐವರು ಕೋವಿಡ್ ಸಂಪರ್ಕಿತರು, ಒಬ್ಬರು ಉಸಿರಾಟದ ತೊಂದರೆ ಹಾಗೂ ನಾಲ್ವರು ಶೀತಜ್ವರ ದಿಂದ ಬಳಲುತಿದ್ದಾರೆ ಎಂದು ಡಾ.ಸೂಡ ತಿಳಿಸಿದರು.

ಹೀಗಾಗಿ ಈವರೆಗೆ ಸಂಗ್ರಹಿಸಿದ 12,538 ಗಂಟಲು ದ್ರವದ ಮಾದರಿಗಳಲ್ಲಿ ರವಿವಾರದವರೆಗೆ ಒಟ್ಟು 12,274ರ ಪರೀಕ್ಷಾ ವರದಿ ಬಂದಿವೆ. ಇದರಲ್ಲಿ 11,373 ನೆಗೆಟಿವ್ ಆಗಿದ್ದರೆ, ಇಂದಿನ 13 ಸೇರಿ ಒಟ್ಟು 901 ಸ್ಯಾಂಪಲ್‌ಗಳು ಪಾಸಿಟಿವ್ ಆಗಿ ಬಂದಿವೆ. ಇನ್ನೂ 264 ಸ್ಯಾಂಪಲ್‌ಗಳ ವರದಿಯ ನಿರೀಕ್ಷೆುಲ್ಲಿ ದ್ದೇವೆ ಎಂದವರು ಹೇಳಿದರು.

ಇಂದು ರೋಗದ ಗುಣಲಕ್ಷಣದೊಂದಿಗೆ ಒಟ್ಟು 10 ಮಂದಿ ಆಸ್ಪತ್ರೆಗಳ ಐಸೋಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಇವರಲ್ಲಿ 6 ಮಂದಿ ಪುರುಷರು ಹಾಗೂ ನಾಲ್ವರು ಮಹಿಳೆಯರು. ಕೊರೋನ ಶಂಕಿತರು ಇಬ್ಬರು, ಉಸಿರಾಟದ ತೊಂದರೆಯವರು ಏಳು ಮಂದಿ ಹಾಗೂ ಶೀತಜ್ವರದವರು ಒಬ್ಬರು ಇದರಲ್ಲಿ ಸೇರಿದ್ದಾರೆ.

ಇಂದು ವಿವಿಧ ಆಸ್ಪತ್ರೆಗಳ ಐಸೋಲೇಶನ್ ವಾರ್ಡಿನಿಂದ ನಾಲ್ವರು ಬಿಡುಗಡೆ ಗೊಂಡಿದ್ದು, 80 ಮಂದಿ ಇನ್ನೂ ವೈದ್ಯರ ನಿಗಾದಲ್ಲಿದ್ದಾರೆ. ಈವರೆಗೆ ಒಟ್ಟು 768 ಮಂದಿ ಐಸೋಲೇಷನ್ ವಾರ್ಡಿನಿಂದ ಬಿಡುಡೆಗೊಂಡಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕೊರೋನ ಸೋಂಕಿನ ಗುಣಲಕ್ಷಣದ 113 ಮಂದಿ ರವಿವಾರ ನೊಂದಣಿಗೊಂಡಿದ್ದು, ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 5166 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಇವರಲ್ಲಿ 4344ಮಂದಿ (ಇಂದು 38) 28 ದಿನಗಳ ನಿಗಾವಣೆ ಹಾಗೂ 4841 ಮಂದಿ 14 ದಿನಗಳ ನಿಗಾವಣೆಯನ್ನು ಪೂರೈಸಿದ್ದಾರೆ.

ಜಿಲ್ಲೆಯಲ್ಲಿ ಈಗಲೂ 244 ಮಂದಿ ಹೋಮ್ ಕ್ವಾರಂಟೈನ್‌ನಲ್ಲೂ, 145 ಮಂದಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಇದ್ದು, ಕೇವಲ ಒಬ್ಬರು ಮಾತ್ರ ಆಸ್ಪತ್ರೆ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದರು.

ಒಬ್ಬರ ಸ್ಥಿತಿ ಸ್ವಲ್ಪ ಗಂಭೀರ

ಮುಂಬೈಯಿಂದ ಜಿಲ್ಲೆಗೆ ಆಗಮಿಸಿ ಒಂದು ವಾರ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಮನೆಗೆ ಕಳುಹಿಸಲ್ಪಟ್ಟ ಬೈಂದೂರಿನ 47ರ ಹರೆಯದ ಪುರುಷರೊಬ್ಬರು ತೀವ್ರ ಜ್ವರ ಹಾಗೂ ಉಸಿರಾಟದ ತೊಂದರೆಗಾಗಿ ನಿನ್ನೆ ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಪರಿಸ್ಥಿತಿ ವಿಷಮಿಸಿದ್ದರಿಂದ ಅವರನ್ನು ರಾತ್ರಿ ವೇಳೆ ನಗರದ ಡಾ.ಟಿಎಂಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಿಲ್ಲಾಸ್ಪತ್ರೆಗೆ ದಾಖಲಾದ ಬಳಿಕ ಅವರಿಗೆ ನಡೆಸಲಾದ ಗಂಟಲು ದ್ರವ ಮಾದರಿ ಪರೀಕ್ಷೆ ಇಂದು ಪಾಸಿಟಿವ್ ಆಗಿ ಬಂದಿದೆ. ಅವರ ಸ್ಥಿತಿ ಸ್ವಲ್ಪ ಮಟ್ಟಗೆ ಗಂಭೀರವಾಗಿದೆ. ಉಸಿರಾಟದ ತೊಂದರೆ ಇರುವ ಅವರಿಗೆ ಆಕ್ಸಿಜನ್ ನೀಡಲಾಗುತ್ತಿದೆ ಎಂದು ಡಿಎಚ್‌ಓ ಡಾ.ಸೂಡ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News