×
Ad

ಮೂವರು ಬಾಲಕರು ಸಹಿತ 17 ಮಂದಿಗೆ ಕೊರೋನ: ದ.ಕ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 182ಕ್ಕೇರಿಕೆ

Update: 2020-06-07 20:41 IST

ಮಂಗಳೂರು, ಜೂ.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರವಿವಾರ 17 ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ. ಈ ಪೈಕಿ ಮೂವರು ಬಾಲಕರಲ್ಲೂ ಸೋಂಕು ಪತ್ತೆಯಾಗಿದೆ.

ಸೋಂಕಿತರಲ್ಲಿ 16 ಮಂದಿ ಮುಂಬೈನಿಂದ ಬಂದವರಾಗಿದ್ದರೆ, ಮತ್ತೋರ್ವ ಗೋವಾದಿಂದ ವಾಪಸಾದವರು. ಈ ನಡುವೆ 13 ವರ್ಷದ ಬಾಲಕಿ ಸಹಿತ ಐವರು ಸೋಂಕಿನಿಂದ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮುಂಬೈನಿಂದ ಆಗಮಿಸಿದ್ದ 15 ಮಂದಿ ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಕ್ವಾರಂಟೈನ್ ಅವಧಿ ಬಳಿಕ 11 ಮಂದಿ ಮೂಡುಬಿದಿರೆಗೆ ಆಗಮಿಸಿದ್ದರೆ, ಇನ್ನುಳಿದ ನಾಲ್ವರು ಬೆಳ್ತಂಗಡಿಗೆ ತೆರಳಿದ್ದರು. ಇವರ ಗಂಟಲು ದ್ರವ ಮಾದರಿ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಮೇ 14ರಂದು ಮುಂಬೈನಿಂದ ಆಗಮಿಸಿದ್ದ 52 ವರ್ಷದ ವ್ಯಕ್ತಿಯು ಉಡುಪಿ ಕ್ವಾರಂಟೈನ್‌ನಲ್ಲಿದ್ದು, ಮಂಗಳೂರಿಗೆ ಬಂದಾಗ ಆತನ ವರದಿಯು ಪಾಸಿಟಿವ್ ಬಂದಿದೆ. ಅದೇ ದಿನ ಗೋವಾದಿಂದ ಬಂದಿದ್ದ 32 ವರ್ಷದ ವ್ಯಕ್ತಿಯು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಬಳಿಕ ಮೂಡುಬಿದಿರೆಗೆ ತೆರಳಿದ್ದರು. ಈತನ ವರದಿಯಲ್ಲೂ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆ ವೆನ್ಲಾಕ್‌ಗೆ ದಾಖಲಿಸಲಾಗಿದೆ.

ಬಾಲಕರಿಗೂ ಸೋಂಕು: ಮುಂಬೈನಿಂದ ವಾಪಸಾಗಿದ್ದ ಮೂವರು ಬಾಲಕರಿಗೆ ಸೋಂಕು ಇರುವುದು ದೃಢಪಟ್ಟಿದೆ. 14 ಮತ್ತು 17 ವರ್ಷದ ಬಾಲಕರು ಉಡುಪಿಯಲ್ಲಿನ ಕ್ವಾರಂಟೈನ್ ಕೇಂದ್ರದಲ್ಲಿದ್ದು, ನಂತರದಲ್ಲಿ ಮೂಡುಬಿದಿರೆಗೆ ತೆರಳಿದ್ದರೆ, 15 ವರ್ಷದ ಮತ್ತೋರ್ವ ಬಾಲಕನು ಬೆಳ್ತಂಗಡಿಗೆ ಪ್ರಯಾಣ ಬೆಳೆಸಿದ್ದ. ಇವರ ವರದಿಯಲ್ಲಿ ಪಾಸಿಟಿವ್ ಬಂದ ನಂತರ ವೆನ್ಲಾಕ್‌ಗೆ ದಾಖಲಿಸಲಾಗಿದೆ.

ಬಾಲಕಿ ಸಹಿತ ಐವರು ಗುಣಮುಖ: ಕೊರೋನಾ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ರವಿವಾರ ಮತ್ತೆ ಐವರು ಡಿಸ್ಚಾರ್ಜ್ ಆಗಿದ್ದಾರೆ. 13 ವರ್ಷದ ಬಾಲಕಿ ಸೇರಿದಂತೆ 25, 54, 30, 49 ವರ್ಷದ ಪುರುಷರ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಅವರನ್ನು ಮನೆಗೆ ಕಳುಹಿಸಲಾಗಿದೆ. ಇದರೊಂದಿಗೆ ಇದುವರೆಗೆ 96 ಮಂದಿ ಗುಣಮುಖರಾದಂತಾಗಿದೆ. ಸದ್ಯ 89 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News