×
Ad

ರವಿವಾರ ಪ್ರಯಾಣಿಕರ ಸಂಖ್ಯೆ ವಿರಳ : ಉಡುಪಿ ಜಿಲ್ಲೆಯಲ್ಲಿ ರಸ್ತೆಗೆ ಇಳಿಯದ ಖಾಸಗಿ ಬಸ್‌ಗಳು

Update: 2020-06-07 21:28 IST

ಉಡುಪಿ, ಜೂ.7: ಕೊರೋನ ಭೀತಿಯ ಮಧ್ಯೆ ರಜಾದಿನ ಆಗಿರುವ ರವಿವಾರ ಜನ ಸಂಚಾರ ವಿರಳವಾಗಿರುವುದರಿಂದ ಜಿಲ್ಲೆಯಲ್ಲಿ ಸರ್ವಿಸ್ ಮತ್ತು ಸಿಟಿಬಸ್‌ಗಳ ಸಂಚಾರವನು್ನ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಕಳೆದ ಒಂದು ವಾರದ ಹಿಂದೆ ಪುನಾರಂಭಗೊಂಡ ಬಳಿಕ ಜಿಲ್ಲೆಯಲ್ಲಿ 50 ಸರ್ವಿಸ್ ಹಾಗೂ ಉಡುಪಿ ನಗರದಲ್ಲಿ 22 ಸಿಟಿ ಬಸ್‌ಗಳು ಸಂಚರಿಸು ತ್ತಿದ್ದವು. ಆದರೆ ರವಿವಾರ ಜಿಲ್ಲೆಯಲ್ಲಿ ಮತ್ತು ನಗರದಲ್ಲಿ ಜನರ ಓಡಾಟ ತೀರಾ ವಿರಳ ವಾಗಿರುವುದರಿಂದ ಈ ಎಲ್ಲ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿತ್ತು. ಇದ ರಿಂದ ಸಿಟಿ ಹಾಗೂ ಸರ್ವಿಸ್ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿದ್ದವು.

‘ಕಳೆದ ಒಂದು ವಾರದಿಂದ ಎಲ್ಲ ಸರ್ವಿಸ್ ಬಸ್‌ಗಳನ್ನು ನಷ್ಟದಲ್ಲೇ ಓಡಿ ಸುತ್ತಿದ್ದೇವೆ. ದಿನಕ್ಕೆ ಸಂಗ್ರಹವಾಗುವ ಹಣಕ್ಕಿಂತ ಹೆಚ್ಚು ಡಿಸೇಲ್, ಚಾಲಕ ಮತ್ತು ನಿರ್ವಾಹಕರ ಸಂಬಳ ಸೇರಿದಂತೆ ಇತರ ಖರ್ಚುಗಳು ಆಗುತ್ತಿವೆ. ಆದುದರಿಂದ ಪ್ರಯಾಣಿಕರ ಸಂಖ್ಯೆ ತೀರಾ ಕಡಿಮೆ ಇರುವ ರವಿವಾರ ದಿನ ಬಸ್ ಸಂಚಾರ ಬಂದ್ ಮಾಡಲಾಗಿದೆ. ನಾಳೆಯಿಂದ ಎಂದಿನಂತೆ ಬಸ್ ಸಂಚಾರ ಮುಂದು ವರೆಯಲಿದೆ’ ಎಂದು ಉಡುಪಿ ಸಿಟಿಬಸ್ ಮಾಲಕರ ಸಂಘದ ಅಧ್ಯಕ್ಷ ಹಾಗೂ ಕೆನರಾ ಬಸ್ ಮಾಲಕರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.

ಸರಕಾರಿ ಬಸ್‌ಗಳ ಓಡಾಟ

ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ಇಲ್ಲದಿದ್ದರೂ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರವು ಇಂದು ಪ್ರಮುಖ ಮಾರ್ಗಗಳಲ್ಲಿ ಮುಂದುವರೆದಿತ್ತು.

ಪ್ರಯಾಣಿಕರಿಲ್ಲದ ಕಾರಣ ಕೆಲವು ಮಾರ್ಗಗಳ ಬಸ್‌ಗಳ ಸಂಚಾರವನ್ನು ನಿಲ್ಲಿಸಲಾಗಿತ್ತು. ಉಳಿದಂತೆ ಬೆಳಗ್ಗೆಯಿಂದ ಸಂಜೆಯವರೆಗೆ ಉಡುಪಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಿಂದ ಮಂಗಳೂರಿಗೆ 7, ಕಾರ್ಕಳಕ್ಕೆ 4 ಶಿವಮೊಗ್ಗಕ್ಕೆ 6, ಬೆಂಗಳೂರಿಗೆ 4, ಚಿಕ್ಕಮಗಳೂರಿಗೆ ಒಂದು ಬಸ್ ಸಂಚರಿಸಿದೆ. ಖಾಸಗಿ ಬಸ್‌ಗಳು ಇಲ್ಲದ ಕಾರಣ ಸರಕಾರಿ ಬಸ್‌ಗಳಲ್ಲಿ ಹಿಂದಿಗಿಂತ ಇಂದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರು ಕಂಡುಬಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News