ದ.ಕ. ಜಿಲ್ಲೆ: ಬಸ್‌ಗಳ ಓಡಾಟಕ್ಕೆ ಹಿಂದೇಟು; ನಷ್ಟದಲ್ಲಿ ಖಾಸಗಿ ಬಸ್ ಉದ್ಯಮ
ಮಂಗಳೂರು, ಜೂ.7: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಸತತ 71 ದಿನಗಳ ಕಾಲ ಸಂಚಾರ ಆರಂಭಿಸದಿದ್ದ ದ.ಕ.ಜಿಲ್ಲೆಯ ಖಾಸಗಿ ಬಸ್‌ಗಳ ಪೈಕಿ ಕೆಲವು ಬಸ್‌ಗಳು ಜೂ.1ರಿಂದ ಸಂಚಾರ ಆರಂಭಿಸಿದರೂ ಕೂಡ ಜೂ.8ರಿಂದ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಿಸಲು ಮಾಲಕರು ಹಿಂದೇಟು ಹಾಕುತ್ತಿದ್ದಾರೆ.
ಜೂ.1ರಂದು 120 ಬಸ್‌ಗಳು ಓಡಾಟ ಆರಂಭಿಸಿತ್ತು. ಆ ಬಳಿಕ ಬಜ್ಪೆ, ತಲಪಾಡಿ, ಸುರತ್ಕಲ್ ಪ್ರದೇಶದಲ್ಲಿ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್‌ಗಳ ಓಡಾಟದ ಸಂಖ್ಯೆಯಲ್ಲಿ ಸ್ವಲ್ಪ ಹೆಚ್ಚಳ ಕಂಡು ಬಂದಿತ್ತು. ಅಂದರೆ ಹೆಚ್ಚುವರಿಯಾಗಿ 20-30 ಬಸ್‌ಗಳು ಓಡಾಡುತ್ತಿದ್ದವು. ಆದರೆ ತೀರಾ ನಷ್ಟದಲ್ಲೇ ಬಸ್‌ಗಳು ಓಡಾಟ ನಡೆಸಿದ ಕಾರಣ ಲಾಕ್‌ಡೌನ್ ಸಂಪೂರ್ಣ ತೆರವಾಗಿ ಜನರಲ್ಲಿ ಕೊರೋನ ಕುರಿತಾದ ಭಯ-ಆತಂಕ ದೂರ ಆಗುವವರೆಗೆ ಅಥವಾ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವವರೆಗೆ ಪೂರ್ಣ ಪ್ರಮಾಣದಲ್ಲಿ ಬಸ್ ಓಡಾಟ ನಡೆಸದಿರಲು ಖಾಸಗಿ ಮಾಲಕರು ಸ್ವಯಂ ನಿರ್ಧರಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಬಸ್ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್ ಆಳ್ವ ‘ಕಳೆದೊಂದು ವಾರ ಎಲ್ಲಾ ಬಸ್‌ಗಳ ಮಾಲಕರು ಸಂಪೂರ್ಣ ನಷ್ಟ ಅನುಭವಿಸಿದ್ದಾರೆ. ಸರಾಸರಿ 1 ಬಸ್‌ನಲ್ಲಿ ಸುಮಾರು 8 ಸಾವಿರ ರೂ.ವರೆಗೆ ನಷ್ಟವಾಗಿವೆ. ಅಂದರೆ ಕಳೆದೊಂದು ವಾರದಲ್ಲಿ ಸಿಟಿ ಬಸ್ ಉದ್ಯಮಕ್ಕೆ ಅಂದಾಜು 80 ಲಕ್ಷ ರೂ.ವರೆಗೆ ನಷ್ಟವಾಗಿದೆ. ಕೆಲವು ಬಸ್ ಮಾಲಕರಿಗೆ ಚಾಲಕ-ನಿರ್ವಾಹಕರಿಗೆ ಸಂಬಳ ಕೊಡುವಷ್ಟು ಕಲೆಕ್ಷನ್ ಬಂದಿಲ್ಲ. ಇನ್ನು ಕೆಲವರಿಗೆ ಡೀಸೆಲ್ ಹಾಕಲೂ ಹಣ ಬಂದಿಲ್ಲ. ಒಟ್ಟಿನಲ್ಲಿ ನಷ್ಟದಲ್ಲೇ ಮುಂದುವರಿದಿದೆ. ಶನಿವಾರ ಒಂದಷ್ಟು ಕಲೆಕ್ಷನ್ ಬಂದರೂ ಕೂಡ ರವಿವಾರ ಏನೇನೂ ಆಗಿಲ್ಲ. ಹಲವು ರೂಟ್‌ಗಳಲ್ಲಿ ರವಿವಾರ ಬಸ್ ಓಡಿಸಲು ವಾತಾವರಣ ಪೂರಕವಾಗಿರಲಿಲ್ಲ. ಈ ನಷ್ಟ ಭರಿಸಲು ಸಾಧ್ಯವಿಲ್ಲದಿದ್ದರೂ ಭವಿಷ್ಯದ ಹಿತದೃಷ್ಟಿಯಿಂದ ಬಸ್ ಓಡಾಟ ನಡೆಸಬೇಕಿದೆ. ಸದ್ಯ ಪೂರ್ಣ ಪ್ರಮಾಣದಲ್ಲಿ ಬಸ್ ಸಂಚಾರ ಆರಂಭಿಸಲು ಕಾಲ ಸೂಕ್ತವಾಗಿಲ್ಲ. ಪರಿಸ್ಥಿತಿ ಅವಲೋಕಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.