ಶಾಲೆಗಳ ಪುನರಾರಂಭಕ್ಕೆ ಎಸ್‌ಡಿಪಿಐ ವಿರೋಧ
ಮಂಗಳೂರು, ಜೂ.7: ಲಾಕ್‌ಡೌನ್ ಸಡಿಲಿಕೆ ನಂತರ ದೇಶಾದ್ಯಂತ ಕೊರೋನ ವೈರಸ್ ರೋಗದ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿವೆ. ಈ ಸಂದರ್ಭ ರಾಜ್ಯ ಸರಕಾರ ಶಾಲೆಗಳನ್ನು ಜು.1ರಿಂದ ಪುನರಾರಂಭಿಸುವ ಬಗ್ಗೆ ಚಿಂತನೆ ನಡೆಸುತ್ತಿರುವುದು ಅಪಾಯಕಾರಿಯಾಗಿದೆ. ರಾಜ್ಯದಲ್ಲೂ ಸಾಂಕ್ರಾಮಿಕ ಪೀಡಿತರ ಸಂಖ್ಯೆ ವೃದ್ಧಿಯಾಗುತ್ತಿರುವುದರಿಂದ ಸದ್ಯಕ್ಕೆ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಕ್ರಿಯೆ ತೀರಾ ಅವೈಜ್ಞಾನಿಕವೂ ಅತಾರ್ಕಿಕವೂ ಆಗಿರುತ್ತದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕರ್ನಾಟಕ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಪ್ರತಿಕ್ರಿಯಿಸಿದ್ದಾರೆ.
ಫ್ರಾನ್ಸ್, ಸ್ಪೇನ್, ಇಸ್ರೇಲ್ ಮತ್ತಿತರ ರಾಷ್ಟ್ರಗಳಲ್ಲಿ ಪುನರಾರಂಭಗೊಂಡ ಶಾಲೆಗಳಲ್ಲಿ ಹಾಜರಾದ ಮಕ್ಕಳಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿರುವುದರಿಂದ ಆತಂಕದ ಸ್ಥಿತಿ ನಿರ್ಮಾಣಗೊಂಡಿದೆ. ಅತ್ಯಂತ ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುತ್ತಿರುವ ಈ ದೇಶಗಳಲ್ಲಿ ಇಂತಹ ಸ್ಥಿತಿ ಉದ್ಭವವಾಗಿದೆ. ಕರ್ನಾಟಕದಲ್ಲೂ ಶಾಲೆಗಳಿಗೆ ತೆರಳುವ ಮಕ್ಕಳನ್ನು ಬಸ್ಸುಗಳಲ್ಲಿ, ರಿಕ್ಷಾ - ವ್ಯಾನ್‌ಗಳಲ್ಲಿ ತುಂಬಿಸಿ ಸಾಗಿಸುವುದು ಸಾಮಾನ್ಯವಾಗಿದೆ. ಅಲ್ಲದೆ ವಿವಿಧ ಸಾಮಾಜಿಕ ಪರಿಸರಗಳಿಂದ ಬರುವ ಮಕ್ಕಳು ಶಾಲೆಗಳಲ್ಲಿ ಒಂದಾಗಿ ಸೇರಿಕೊಳ್ಳುವಾಗ ಸಾಂಕ್ರಾಮಿಕ ರೋಗದ ಅಪಾಯ ಹೆಚ್ಚುವ ಸಂಭವವಿದೆ. ಇದರಿಂದ ಕಲಿಕೆಯಲ್ಲಿ ಪೂರ್ಣ ಶ್ರದ್ಧೆಯನ್ನು ಪಾಲಿಸುವುದು ಅಸಾಧ್ಯವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಆಗಸ್ಟ್ ಕೊನೆಯವರೆಗೂ ಕಾದು ನೋಡಿ ಪರಿಸ್ಥಿತಿಯನ್ನು ಅವಲೋಕಿಸಿದ ನಂತರ ಶಾಲೆಗಳ ಪುನರಾರಂಭದ ಬಗ್ಗೆ ಸೂಕ್ತ ನಿರ್ಧಾರ ವನ್ನು ಸರಕಾರ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.