ಭಟ್ಕಳ: ಮಂಗಳವಾರದಿಂದ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ

Update: 2020-06-07 16:47 GMT

ಭಟ್ಕಳ:  ಕಳೆದ 2ತಿಂಗಳಿನಿಂದ ಲಾಕ್‍ಡೌನ್ ನಿಂದಾಗಿ ಮುಚ್ಚಲ್ಪಟ್ಟಿರುವ ಎಲ್ಲ ಧರ್ಮಿಯರ ಪ್ರಾರ್ಥನ ಮಂದಿರಗಳು ಜೂ.8ರಿಂದ ಮರು ಆರಂಭಗೊಂಡು ಭಕ್ತರಿಗೆ ದೇವರ ದರ್ಶನದ ಭಾಗ್ಯ ದೊರೆಯಲಿದೆ ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದ್ದು ಭಟ್ಕಳದಲ್ಲಿರುವ ಸುಮಾರು 150ಕ್ಕೆ ಹೆಚ್ಚು ಮಸೀದಿಗಳು ಜೂ.9ರಿಂದ ಸಾಮೂಹಿಕ ಪ್ರಾರ್ಥನೆಗಾಗಿ ತೆರೆದುಕೊಳ್ಳಲಿವೆ.

ಈ ಕುರಿತಂತೆ ರವಿವಾರ ಇಲ್ಲಿನ ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಹಾಗೂ ಮರ್ಕಝಿ ಖಲಿಫಾ ಜಮಾಅತ್ ನ ಖಾಝಿಗಳು, ಪದಾಧಿಕಾರಿಗಳು ಹಾಗೂ ಮಜ್ಲಿಸೆ ಇಸ್ಲಾಹ್ –ವ-ತಂಝೀಮ್ ಸಂಸ್ಥೆಯ ಮುಖಂಡರೊಂದಿಗೆ ಮಾತುಕತೆ ನಡೆಸಿದ್ದು ಜೂ.8 ರ ಬದುಲು ಜೂ.9 ರಂದು ಮಸೀದಿಗಳನ್ನು ತೆರೆಯಲು ಸರ್ವಾನುಮತದ ನಿರ್ಣಯವನ್ನು ಕೈಗೊಳ್ಳಲಾಗಿದೆ. 

ಈ ಕುರಿತಂತೆ ತಂಝೀಮ್ ಕಚೇರಿಯಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಖೀಬ್ ಎಂ.ಜೆ., ಬಹಳ ದಿನಗಳ ನಂತರ ಮುಸ್ಲಿಮರಿಗೆ ಮಸೀದಿಗೆ ಹೋಗುವ ಭಾಗ್ಯ ದೊರೆತಿದೆ. ದೈಹಿಕ ಅಂತರ ಕಾಪಾಡಿ ಕೊಳ್ಳುವದರ ಮೂಲಕ ಮಸೀದಿಯಲ್ಲಿ ಪ್ರಾರ್ಥನೆಗೆ ಅವಕಾಶವನ್ನು ನೀಡಲು ನಿರ್ಣಯಿಸಿದ್ದು ಮನೆಯಿಂದಲೆ ವುಝೂ (ಅಂಗಸ್ನಾನ) ಮಾಡಿಕೊಂಡು ಬರಬೇಕು, ತಮ್ಮ ತಮ್ಮ ನಮಾಝ್ ಹಾಸುಗಳನ್ನು ಮನೆಯಿಂದಲೆ ತರಬೇಕು, ಮಸೀದಿ ಕಮಿಟಿಯವರು ಮಸೀದಿಯ ದ್ವಾರದಲ್ಲಿ ಸೆನಿಟೈಸರ್  ಮತ್ತು ನೀರಿನ ವ್ಯವಸ್ಥೆ ಮಾಡಿಕೊಳ್ಳಬೇಕು ಎಂಬ ಸೂಚನೆಯೊಂದಿಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಅನುಮತಿಯನ್ನು ನೀಡಿಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಎರಡೂ ಜಮಾಅತ್ ನ ಪ್ರಧಾನ ಕಾಝಿ ಗಳಾದ ಮೌಲಾನ ಇಕ್ಬಾಲ್ ಮುಲ್ಲಾ ನದ್ವಿ, ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ನದ್ವಿ ಮದನಿ, ತಂಝೀಮ್ ಸಂಸ್ಥೆಯ ಅಧ್ಯಕ್ಷ ಎಸ್.ಎಂ.ಸೈಯ್ಯದ್ ಪರ್ವಾಝ್, ಜಮಾಅತುಲ್ ಮುಸ್ಲಿಮೀನ್ ಅಧ್ಯಕ್ಷ  ಜಾನ್ ಅಬ್ದುಲ್ ರಹಮಾನ್ ಮೊತೆಶಮ್ ಹಾಗು ವಿವಿಧ ಮಸೀದಿಯ ಮುಖಂಡರು, ಉಲೇಮಾಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News