×
Ad

ಮಂಗಳೂರು: ಕೇಂದ್ರ ಜುಮಾ ಮಸೀದಿಯಲ್ಲಿ ನಮಾಝ್ ಆರಂಭ

Update: 2020-06-08 15:03 IST

ಮಂಗಳೂರು, ಜೂ.8: ಕೊರೋನ-ಲಾಕ್‌ಡೌನ್ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ನಮಾಝ್ ಪ್ರಕ್ರಿಯೆಯು ಸರಕಾರದ ಸೂಚನೆಯ ಮೇರೆಗೆ ನಗರದ ಬಂದರ್‌ನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸ್ಜಿದ್ ಮತ್ತು ಕುದ್ರೋಳಿಯ ಕಂಡತ್‌ಪಳ್ಳಿಯಲ್ಲಿ ಸೋಮವಾರ ದಿಂದ ಆರಂಭಗೊಂಡಿದೆ.

ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಜಮಾಅತ್ ಖಾನಾ ಮತ್ತು ಕುದ್ರೋಳಿಯ ಕಂಡತ್‌ಪಳ್ಳಿಯಲ್ಲಿ ಸುಬಹ್ (ಪ್ರಾತಃಕಾಲ)ದ ನಮಾಝ್‌ನ್ನು ಸರಕಾರದ ಮಾರ್ಗಸೂಚಿಯಂತೆ ಆರಂಭಿಸಲಾಯಿತು. ಬಾಂಗ್ (ಆಝಾನ್ ಕರೆ)ಗೆ ಕೆಲವು ನಿಮಿಷಗಳಿಗೆ ಮುನ್ನ ಮಸೀದಿಯ ಬಾಗಿಲು ತೆರೆಯಲಾಯಿತು. ಬಾಂಗ್ ಆದ ತಕ್ಷಣ ನಮಾಝ್ ಮಾಡಲಾಯಿತು. ನಮಾಝ್ ಮುಗಿದೊಡನೆ ಮತ್ತೆ ಬಾಗಿಲು ಹಾಕಲಾಯಿತು.

ಕೊರೋನ ವೈರಸ್ ರೋಗ ತಡೆಗಟ್ಟುವ ಸಲುವಾಗಿ ರಾಜ್ಯ ಸರಕಾರ, ವಕ್ಫ್ ಮಂಡಳಿ ಮತ್ತು ಪ್ರಮುಖ ಉಲಮಾ-ಉಮರಾ ಸಂಘಟನೆ ಹಾಗೂ ಖಾಝಿಯ ಸೂಚನೆಯಂತೆ ಮನೆಯಲ್ಲೇ ವಝೂ ಮಾಡಿ ಬರಲಾಯಿತು ಮತ್ತು ಮುಸಲ್ಲ ತರಲಾಯಿತು. ಮಸೀದಿ ಪ್ರವೇಶಿಸುವಾಗ ಮತ್ತು ಹೊರಹೋಗುವಾಗ ಸ್ಯಾನಿಟೈಝರ್/ಸಾಬೂನು ಬಳಸಿ ಕೈಗಳನ್ನು ತೊಳೆಯಲಾಯಿತು. ಸುರಕ್ಷಿತ ಅಂತರವನ್ನೂ ಕಾಪಾಡಲಾಯಿತು.

ನಗರದ ಈದ್ಗಾ ಜುಮಾ ಮಸ್ಜಿದ್, ಪಂಪ್‌ವೆಲ್‌ನ ಮಸ್ಜಿದುತ್ತಖ್‌ವಾ, ಕಂಕನಾಡಿಯ ಜುಮಾ ಮಸ್ಜಿದ್, ಹಂಪನಕಟ್ಟೆಯ ಮಸ್ಜಿದುನ್ನೂರ್, ಪೊಲೀಸ್‌ಲೇನ್‌ನ ಫೌಝಿಯಾ, ಸ್ಟೇಟ್‌ಬ್ಯಾಂಕ್‌ನ ಇಬ್ರಾಹೀಂ ಖಲೀಲ್ ಮಸ್ಜಿದ್, ಬಂದರ್ ಕಂದುಕ ಬದ್ರಿಯಾ ಮಸ್ಜಿದ್‌ನಲ್ಲಿ ಸೋಮವಾರ ನಮಾಝ್ ಆರಂಭಗೊಂಡಿಲ್ಲ.

*ಸರಕಾರದ ಅನುಮತಿಯಿದ್ದರೂ ಕೂಡ ಸದ್ಯ ನಗರದ ಜೆಪ್ಪು ಮುಹಿಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಸಾಮೂಹಿಕ ನಮಾಜು ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸದಿರಲು ಜೂ.5ರಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಹುಸೈನ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News