ಜೂ. 10ರಿಂದ ತೆರೆಯಲಿರುವ ಪಿಲಿಕುಳ ನಿಸರ್ಗಧಾಮ : ಸೋಮವಾರ ವಾರದ ರಜೆ
ಮಂಗಳೂರು, ಜೂ.8: ಕೋವಿಡ್ 19ರ ನಿಯಂತ್ರಣದ ಸಲುವಾಗಿ ಮುಚ್ಚಲ್ಪಟ್ಟಿದ್ದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮವನ್ನು ಸರಕಾರದ ಮಾರ್ಗಸೂಚಿಯಂತೆ ಜೂ.10ರಿಂದ ತೆರೆಯಲಾಗುವುದು ಎಂದು ಪ್ರಕಟನೆ ತಿಳಿಸಿದೆ.
ಬೆಳಗ್ಗೆ 9:30ರಿಂದ ಸಂಜೆ 5 ಗಂಟೆವರೆಗೆ ಜೈವಿಕ ಉದ್ಯಾನ, ಲೇಕ್ ಗಾರ್ಡನ್, ಸಂಸ್ಕೃತಿ ಗ್ರಾಮ, ಆರ್ಬೋರೇಟಮ್ ಮತ್ತು ಗುತ್ತುಮನೆಯ ಆಕರ್ಷಣೆಗಳನ್ನು ಸಾರ್ವಜನಿಕರ ವೀಕ್ಷಣೆಗೆ ತೆರೆಯಲಾಗುವುದು. ಪ್ರಾದೇಶಿಕ ವಿಜ್ಞಾನ ಕೇಂದ್ರ ಮತ್ತು ತಾರಾಲಯವನ್ನು ಮುಂದಿನ ದಿನಗಳಲ್ಲಿ ಸರಕಾರದ ಆದೇಶವನ್ನು ಅನುಸರಿಸಿ ತೆರೆಯಲಾಗುವುದು.
ಪ್ರತೀ ಸೋಮವಾರ ವಾರದ ರಜೆ ಇರುತ್ತದೆ. ಸಂದರ್ಶಕರು ಕನಿಷ್ಠ 6 ಅಡಿ ಅಂತರವನ್ನು ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸಬೇಕು (ಧರಿಸದಿದ್ದವರಿಗೆ ಪ್ರವೇಶವಿರುವುದಿಲ್ಲ). ಎಲ್ಲಾ ಸಂದರ್ಶಕರನ್ನು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ಮಾಡಲಾಗುವುದು. ಸಂದರ್ಶಕರ ದೇಹದ ಉಷ್ಣತೆಯು ಮಿತಿಗಿಂತ ಹೆಚ್ಚಿದ್ದರೆ ಅಂತಹ ವ್ಯಕ್ತಿಗಳಿಗೆ ಪ್ರವೇಶವನ್ನು ನಿರಾಕರಿಸಲಾಗುವುದು.
ಯಾವುದೇ ಸಂದರ್ಶಕರಿಗೆ ಜ್ವರ, ಕೆಮ್ಮು, ಶೀತ, ಗಂಟಲು ನೋವು ಅಥವಾ ಉಸಿರಾಟದ ತೊಂದರೆ ಇದ್ದರೆ ಅಂತಹ ವ್ಯಕ್ತಿ ಗಳಿಗೂ ಪ್ರವೇಶವನ್ನು ನಿರಾಕರಿಸಲಾಗುವುದು. ಲೇಕ್‌ನಲ್ಲಿ ಮಕ್ಕಳ ಆಟಕ್ಕೆ ಅವಕಾಶವಿಲ್ಲ ಎಂದು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.