ಉಡುಪಿ ಜಿಲ್ಲೆಯಲ್ಲಿ ಬೆರಳೆಣಿಕೆಯ ಮಸೀದಿಗಳು ಪುನಾರಂಭ
ಉಡುಪಿ, ಜೂ.8: ರಾಜ್ಯ ಸರಕಾರದ ಅನುಮತಿಯಂತೆ ಕಳೆದ ಎರಡೂವರೆ ತಿಂಗಳು ಮುಚ್ಚುಗಡೆಯಾಗಿದ್ದ ಉಡುಪಿ ಜಿಲ್ಲೆಯ ಮಸೀದಿಗಳ ಪೈಕಿ ಕೆಲ ವೊಂದು ಮಸೀದಿಗಳು ಸರಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿ ಸುವುದರೊಂದಿಗೆ ಪುನಾರಂಭಗೊಂಡಿವೆ.
ಜಿಲ್ಲೆಯ ವಕ್ಪ್ ಮಂಡಳಿಯಿಂದ ನೋಂದಾಯಿತ 139 ಸಹಿತ ಒಟ್ಟು 225 ಮಸೀದಿಗಳಿದ್ದು, ಇವುಗಳಲ್ಲಿ ಕಾಪು ಪೊಲಿಪು ಜುಮಾ ಮಸೀದಿ, ಉಡುಪಿ ಕರಂಬಳ್ಳಿಯ ಸಂತೋಷ್‌ನಗರದ ಬದ್ರಿಯಾ ಜುಮಾ ಮಸೀದಿ, ಹೂಡೆಯ ಜದೀದ್ ಸಹಿತ ಮೂರು ಮಸೀದಿಗಳು, ಕೋಡಿಬೆಂಗ್ರೆ, ಗುಜ್ಜರಬೆಟ್ಟುವಿನ ಮಸೀದಿಗಳು ತೆರೆಯುವ ಮೂಲಕ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿದೆ.
ಆಝಾನ್‌ಗೆ ಮೊದಲು ಬಂದವರಿಗೆ ಮಸೀದಿಗೆ ಬಂದವರಿಗೆ ಮಾತ್ರ ನಮಾಝ್ ಅವಕಾಶ ನೀಡಲಾಗಿತ್ತು. ಬಳಿಕ ಯಾರೂ ಬಾರದಂತೆ ಮಸೀದಿ ಯನ್ನು ಲಾಕ್ ಮಾಡಲಾಗಿತ್ತು. ಆಝಾನ್ ಆದ ಕೂಡಲೇ ನಮಾಝ್ ನಿರ್ವಹಿಸಲಾಯಿತು. ಮಸೀದಿಗಳಲ್ಲಿ ಅಂಗಾಂಗ ಶುದ್ಧಿ ಮಾಡಲು ಅವಕಾಶ ಇಲ್ಲದ ಕಾರಣ, ನಮಾಝ್ ನಿರ್ವಹಿಸಲು ಬರುವವರು ಮನೆಯಲ್ಲೇ ಅದನ್ನು ನಿರ್ವಹಿಸಿಕೊಂಡು ಬಂದಿದ್ದರು.
ನಮಾಝ್ ನಿರ್ವಹಿಸಲು ಬರುವ ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿದ್ದರು. ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್ ಬಳಕೆ ಮತ್ತು ಥರ್ಮಲ್‌ಗನ್ ಮೂಲಕ ಸ್ಕ್ರೀನಿಂಗ್ ಮಾಡಲಾಯಿತು. ಮಸೀದಿಗಳಿಗೆ ಹಿರಿಯರು ಮತ್ತು ಮಕ್ಕಳಿಗೆ ಪ್ರವೇಶವನ್ನು ನಿರ್ಬಂಧಿ ಸಲಾಗಿತ್ತು. ಕೆಲವು ಮಸೀದಿಗಳಲ್ಲಿ ಆಯಾ ಮಸೀದಿಗೆ ಒಳಪಟ್ಟ ಕುಟುಂಬದವರಿಗೆ ಮಾತ್ರ ಮಸೀದಿಗೆ ಪ್ರವೇಶಕ್ಕೆ ಅವಕಾಶ ನೀಡಲಾಗಿತ್ತು. ಹೊರಗಿನವರಿಗೆ ಬರಲು ಅವಕಾಶ ಇರಲಿಲ್ಲ. ಪ್ರತಿಯೊಂದು ಜಮಾತ್ ಆದ ಬಳಿಕ ಮಸೀದಿಯನ್ನು ಸ್ಯಾನಿಟೈಸ್ ಮಾಡಲಾಯಿತು.
ಬಹುತೇಕ ಮಸೀದಿಗಳು ತೆರೆಯಲಿಲ್ಲ
ಜಿಲ್ಲೆಯಲ್ಲಿ ಕೊರೋನ ಭೀತಿಯಿಂದಾಗಿ ಬೆರಳಣಿಕೆಯ ಸಂಖ್ಯೆಯ ಮಸೀದಿ ಗಳನ್ನು ಹೊರತು ಪಡಿಸಿ ಬಹುತೇಕ ಮಸೀದಿಗಳು ತೆರೆಯದಿರುವ ಬಗ್ಗೆ ವರದಿಯಾಗಿದೆ. ಉಡುಪಿ ಜಾಮೀಯ ಮಸೀದಿ, ಅಂಜುಮಾನ್ ಮಸೀದಿ, ಮೂಳೂರು ಕೇಂದ್ರ ಜುಮಾ ಮಸೀದಿ, ಗಂಗೊಳ್ಳಿಯ ಎಲ್ಲ ಮಸೀದಿಗಳು, ಆತ್ರಾಡಿ, ಕುಂದಾಪುರ, ಶಿರೂರು, ನಾವುಂದ, ಕಾರ್ಕಳ, ಪಲಿಮಾರು, ಪಡುಬಿದ್ರೆ, ಕನ್ನಂಗಾರ್ ಮಸೀದಿಗಳು ಸದ್ಯಕ್ಕೆ ತೆರೆಯದಿರುವ ಬಗ್ಗೆ ಈಗಾಗಲೇ ನಿರ್ಧಾರ ತೆಗೆದುಕೊಂಡಿವೆ.
ಕೆಲವೊಂದು ಮಸೀದಿಗಳು ಜು.1ರ ಬಳಿಕ ಮತ್ತು ಇನ್ನು ಈ ತಿಂಗಳ ಮಧ್ಯೆ ಪುನಾರಂಭಿಸುವ ಕುರಿತು ತೀರ್ಮಾನ ಕೈಗೊಂಡಿವೆ. ಆದರೆ ಕೆಲವು ಮಸೀದಿ ಗಳು ಜು.1ರ ಬಳಿಕ ಪರಿಸ್ಥಿತಿಯನ್ನು ಆವಲೋಕಿಸಿ ತೀರ್ಮಾನ ಕೈಗೊಳ್ಳುವು ದಾಗಿ ಈಗಾಗಲೇ ನಿಶ್ಚಯಿಸಿವೆ.