ನೇತ್ರಾವತಿ ವೀರರಿಗೆ ಗೂಡಿನಬಳಿ ವೆಲ್ಫೇರ್ ಅಸೋಸಿಯೇಷನ್ ವತಿಯಿಂದ ಸನ್ಮಾನ
ಬಂಟ್ವಾಳ, ಜೂ. 8: ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿದ ಯುವಕನ ಜೀವ ರಕ್ಷಿಸಲು ಕೊನೆ ಕ್ಷಣದ ವರೆಗೆ ಪ್ರಯತ್ನಿಸಿದ ಗೂಡಿನ ಬಳಿ ಮತ್ತು ಪಾಣೆಮಂಗಳೂರು ಪರಿಸರದ ಯುವಕರು ಹಾಗೂ ಹಜ್ ಯಾತ್ರೆಗೆಂದು ಕೂಡಿಟ್ಟ ಹಣವನ್ನು ಲಾಕ್ ಡೌನ್ ಸಂದರ್ಭದಲ್ಲಿ ಬಡವರಿಗೆ ಆಹಾರ ಸಾಮಗ್ರಿಗಳನ್ನು ವಿತರಿಸಿದ ಗೂಡಿನ ಬಳಿಯ ಅಬ್ದುಲ್ ರಹ್ಮಾನ್ ಅವರನ್ನು ಗೂಡಿನಬಳಿ ವೆಲ್ಪೇರ್ ಅಸೋಸಿಯೇಷನ್ ವತಿಯಿಂದ ಇತ್ತೀಚಿಗೆ ಸನ್ಮಾನಿಸಲಾಯಿತು.
ಗೂಡಿನಬಳಿ ಮಸ್ಜಿದ್ ಎ ಮುತ್ತಲಿಬ್ ಇದರ ಖತೀಬ್ ಶಾಫಿ ಇರ್ಫಾನಿ ದುಅ ನೆರವೇರಿಸಿದರು. ವಕ್ಫ್ ಬೋರ್ಡ್ ನಿರ್ದೇಶಕ ಶಾಫಿ ಸಅದಿ ಬೆಂಗಳೂರು, ನಿವೃತ್ತ ಶಿಕ್ಷಕ ರಾಮಚಂದ್ರ ರಾವ್ ಅತಿಥಿಗಳಾಗಿ ಭಾಗವಹಿಸಿದರು.
ಗೂಡಿನಬಳಿ ಮಸೀದಿ ಅಧ್ಯಕ್ಷ ಜಿ.ಎಸ್.ಮುಹಮ್ಮದ್ ಅನ್ವರ್, ಮಾಜಿ ಅಧ್ಯಕ್ಷರಾದ ಜಿ.ಮುಹಮ್ಮದ್ ಹಾಜಿ, ಜಿ.ಕೆ.ಮುಹಮ್ಮದ್, ಗೂಡಿನಬಳಿ ವೆಲ್ಫೇರ್ ಅಸೋಸಿಯೇಷನ್ (ಜಿ.ಡಬ್ಲ್ಯೂ.ಎ.) ಕೇಂದ್ರ ಸಮಿತಿ ಅಧ್ಯಕ್ಷ ಜಿ.ಕೆ.ಸಲೀಂ ಉಪಸ್ಥಿತರಿದ್ದರು.
ನದಿಗೆ ಹಾರಿದ ಯುವಕನ ರಕ್ಷಣೆಗೆ ಪ್ರಯತ್ನಿಸಿದ ಮುಹಮ್ಮದ್, ತೌಸೀಫ್, ಶಮೀರ್, ಝಾಹಿದ್, ಆರೀಫ್, ಮುಖ್ತಾರ್ ಮತ್ತು ದಾನಿ ಅಬ್ದುಲ್ ರಹ್ಮಾನ್ ಅವರನ್ನು ಸನ್ಮಾನಿಸಿ ನಗದು ಪ್ರೋತ್ಸಾಹ ಧನ ವಿತರಿಸಲಾಯಿತು. ಯುವಕರ ಪರವಾಗಿ ಮುಹಮ್ಮದ್ ಅವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಪ್ರಕೃತಿ ವಿಕೋಪ ಹಾಗೂ ನೀರು ಪಾಲಾದವರ ರಕ್ಷಣಾ ಕಾರ್ಯದಲ್ಲಿ ನಿರಂತರವಾಗಿ ತೊಡಗಿಸಿಕೊಂಡಿ ರುವ ಯುವಕರಿಗೆ ಜೀವ ರಕ್ಷಕ ಸಲಕರಣೆಗಳನ್ನು ವಿತರಿಸಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಲಾಯಿತು.
ಜಿ.ಡಬ್ಲ್ಯೂ.ಎ. ಸಮನ್ವಯ ಸಮಿತಿ ಅಧ್ಯಕ್ಷ ಜಿ.ಎಂ.ಅನ್ವರ್ ಹುಸೈನ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಜಿ.ಎಂ.ನೂರುದ್ದೀನ್ ಮಾಸ್ಟರ್ ವಂದಿಸಿದರು. ಜಿ.ಡಬ್ಲ್ಯೂ.ಎ. ಕಾರ್ಯದರ್ಶಿ ಮುಹಮ್ಮದ್ ಸಮೀವುಲ್ಲಾಹ್ ಜಿ. ಕಾರ್ಯಕ್ರಮ ನಿರೂಪಿಸಿದರು.