×
Ad

ಎಸ್‌ಸಿ/ಎಸ್‌ಟಿ ಜನಾಂಗಕ್ಕೆ ಅವಮಾನ ಆರೋಪ: ಡಿಸಿ ವಿರುದ್ಧ ಪ್ರಕರಣ ದಾಖಲಿಸಲು ಆಗ್ರಹ

Update: 2020-06-08 19:50 IST

ಉಡುಪಿ, ಜೂ.8: ಕೊರೋನ ಸೋಂಕಿತರನ್ನು ಅಸ್ಪೃಶ್ಯರಂತೆ ನೋಡಬೇಡಿ ಎಂಬ ಹೇಳಿಕೆ ನೀಡುವ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರನ್ನು ನಿಂದಿಸಿದ ಆರೋಪದಲ್ಲಿ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ವಿರುದ್ಧ ಎಸ್‌ಸಿ ಎಸ್‌ಟಿ ದೌರ್ಜನ್ಯ ಕಡೆ ಕಾಯಿದೆಯಡಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಬೇಕು ಎಂದು ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ, ಜಿಲ್ಲಾಧಿಕಾರಿಯ ನೀಡಿರುವ ಈ ಹೇಳಿಕೆ ಖಂಡನೀಯ. ಇದರಿಂದ ಇಡೀ ಸಮುದಾಯಕ್ಕೆ ದೊಡ್ಡ ಅವಮಾನವಾಗಿದೆ. ಎಸ್‌ಸಿ,ಎಸ್‌ಟಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾಗಿರುವ ಡಿಸಿ, ಎಸ್‌ಸಿ,ಎಸ್‌ಟಿ ಜನಾಂಗದ ಮೇಲಾಗುತ್ತಿರುವ ದೌರ್ಜನ್ಯ, ಅವಮಾನ, ಅಸ್ಪೃಶ್ಯತೆ ನಿರ್ಮೂಲನೆ ಮಾಡಲು ಕಾರ್ಯಸೂಚಿಗಳನ್ನು ಹಾಕಿಕೊಂಡು ದೌರ್ಜನ್ಯ ತಡೆಗಟ್ಟಲು ಕಾರ್ಯಪ್ರವೃತ ರಾಗಬೇಕೆ ಹೊರತು ಖುದ್ಧು ತಾವೇ ಜನಾಂಗೀಯ ನಿಂದನೆ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಟೀಕಿಸಿದರು. ಆದುದರಿಂದ ಜಿ.ಜಗದೀಶ್ ವಿರುದ್ಧ ಎಸ್‌ಸಿ,ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅನ್ವಯ ಪೊಲೀಸ್ ಇಲಾಖೆ ಸ್ವಯಂ ಪೇರಿತವಾಗಿ ಎಫ್‌ಐಆರ್ ದಾಖಲಿಸಿ ಕೊಂಡು ಸೂಕ್ತ ಕಾನೂನು ಕ್ರಮ ಜರಗಿಸಬೇಕು. ಈ ಮೂಲಕ ನೊಂದ ಶೋಷಿತ ಸಮುದಾಯದವರಿಗೆ ನ್ಯಾಯ ದೊರಕಿಸಿ ಕೊಡಬೇಕು. ಇಲ್ಲದಿದ್ದರೆ ಸಮಿತಿಯ ನೇತೃತ್ವದ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನಾ ಕಾರ್ಯದರ್ಶಿ ಸುಧಾಕರ ಸೂರ್ಗೋಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಜ್ಯೋತಿ ಶಿರಿಯಾರ, ಭೀಮ್ ಆರ್ಮಿ ಅಧ್ಯಕ್ಷ ಪ್ರಕಾಶ್ ಹೇರೂರು, ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಬ್ರಹ್ಮಾವರ, ಉಮೇಶ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News