×
Ad

‘ಕೊರೋನ ಆತಂಕ; ಜನರ ಬದುಕಿನೊಂದಿಗೆ ಚೆಲ್ಲಾಟ ಬೇಡ’

Update: 2020-06-08 20:08 IST

ಹೆಬ್ರಿ, ಜೂ. 8: ಹಸಿರು ವಲಯವಾಗಿದ್ದ ಉಡುಪಿ ಜಿಲ್ಲೆಯಲ್ಲಿ ಜನಪ್ರತಿನಿಧಿ ಗಳು ಮತ್ತು ಸರಕಾರದ ದಿವ್ಯ ನಿರ್ಲಕ್ಷದಿಂದಾಗಿ ಕೊರೋನ ಮಹಾಮಾರಿ ಯಾಗಿ ಇದೀಗ ಕೆಂಪು ವಲಯವಾಗಿ ಅಪಾಯದ ಹಂತ ದಾಟಿ ಜನತೆ ಭಯಭೀತರಾಗಿದ್ದಾರೆ. ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರ ದಿವ್ಯ ನಿರ್ಲಕ್ಷವೇ ಇದಕ್ಕೆ ಕಾರಣ ಎಂದು ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಸೋಮವಾರ ಕರೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯ ಬಗ್ಗೆ ಸಂಪೂರ್ಣ ತಿಳಿದಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಜಿಲ್ಲೆಯ ಶಾಸಕರು ಮಂಗಳೂರಿನ ಉಸ್ತುವಾರಿ ಯಾಗಿಸಿ ಉಡುಪಿ ಜಿಲ್ಲೆಗೆ ಬರದಂತೆ ಮಾಡಿದರು. ಈಗ ಜಿಲ್ಲೆಯ ಉಸ್ತುವಾರಿ ಸಚಿವರು ಮೂರ್ನಾಲ್ಕು ತಿಂಗಳಿಗೊಮ್ಮೆ ಅವರಿಗೆ ಪುರುಸೋತ್ತು ಇರುವಾಗ ಬಂದು ಹೋಗುತ್ತಾರೆ. ಯಾರಿಗೂ ಇಚ್ಚಾಶಕ್ತಿ ಇಲ್ಲ ಎಂದು ಅವರು ದೂರಿದರು.

ಜಿಲ್ಲೆಯಲ್ಲಿ ಒಂದು ದಿನ ಕೊರೋನಾ ಪಾಸಿಟಿವ್ ಬಂದ ವ್ಯಕ್ತಿಗೆ ಮರುದಿನ ಕೊರೋನಾ ನೆಗೆಟಿವ್ ಬರುತ್ತದೆ. ಕೊರೋನ ಪರೀಕ್ಷೆ ಹೇಗೆ ನಡೆಯುತ್ತಿದೆ ಎಂದು ಗೊತ್ತಿಲ್ಲ. ಒಟ್ಟಾರೆ ಜನರ ಬದುಕಿನೊಂದಿಗೆ ಚೆಲ್ಲಾಟ ನಡೆಯುತ್ತಿದೆ. ಕೊರೋನಾ ಬಗ್ಗೆ ನಿಮಿಷ ಕ್ಕೊಂದು ನಿಯಮ ಬರುತ್ತಿದೆ. 14ದಿನಗಳ ಕ್ವಾರಂಟೈನ್ ಇದೀಗ 7 ದಿನಕ್ಕೆ ಬಂದಿದೆ. ಕೊರೋನಾ ಪರೀಕ್ಷೆ ವರದಿ ಬರುವ ಮೊದಲೇ ಕ್ವಾರಂಟೈನ್‌ನಲ್ಲಿದ್ದವರನ್ನು ಮನೆಗೆ ಕಳುಹಿಸಲಾಗುತ್ತಿದೆ. ಮತ್ತೆ ನಿಮ್ಮ ವರದಿ ಪಾಸಿಟಿವ್ ಬಂದಿದೆ ಎಂದು ಅವರ ಮನೆಗೆ ಅಧಿಕಾರಿಗಳ ತಂಡವೇ ಬಂದು ಕ್ವಾರಂಟೈನ್ ಹೋಗಲು ಒತ್ತಡ ಹೇರಲಾಗುತ್ತಿದೆ. ಇದರಿಂದ ಆ ಮನೆಮಂದಿ ಕುಟುಂಬ ಸ್ಥರು ಎಲ್ಲರಿಗೂ ಭಯ ಆತಂಕದ ಜೊತೆಗೆ ಕೊರೊನಾ ಭೀತಿ ಹೆಚ್ಚಾಗುತ್ತಿದೆ ಎಂದು ಮಂಜುನಾಥ ಪೂಜಾರಿ ತಿಳಿಸಿದರು.

ಸಮಸ್ಯೆಯೇ ಇಲ್ಲದ ಉಡುಪಿ ಜಲ್ಲೆಯಲ್ಲಿ ಈಗ ಕೊರೊನಾ ಪಾಸಿಟಿವ್ ಸಾವಿರದ ಗಡಿ ದಾಟಿದೆ. ವಿಶೇಷ ಪ್ರಕರಣದ ಜಿಲ್ಲೆ ಎಂದು ಪರಿಗಣಿಸಿ ಸರಕಾರ ಅತೀ ಶೀಘ್ರವಾಗಿ ಕೊರೋನ ಮುಕ್ತ ಮಾಡಬೇಕಿದೆ. ಜನಪ್ರತಿನಿಧಿಗಳು ಪ್ರಚಾರ ಗಿಟ್ಟಿಸಲು ಕ್ವಾರಂಟೈನ್ ಕೇಂದ್ರಗಳಿಗೆ ತಂಡತಂಡವಾಗಿ ಭೇಟಿ ಕೊಡುತಿದ್ದಾರೆ ಎಂದರು.

ಅರಣ್ಯ ಲೂಟಿ, ಮರಳು ದಂಧೆ: ಕೊರೋನ ಮಹಾಮಾರಿಯ ಲಾಕ್‌ಡೌನ್ ಲಾಭವನ್ನು ಪಡೆದ ಮಂದಿಯಿಂದ ಹೆಬ್ರಿ, ಕಾರ್ಕಳ ತಾಲೂಕಿನ ವಿವಿದೆಡೆ ಬೇಕಾಬಿಟ್ಟಿ ಮರಳು ದಂಧೆ, ಅಕ್ರಮ ಗಣಿಗಾರಿಕೆ ಮತ್ತು ಅರಣ್ಯ ಲೂಟಿ ನಡೆಯುತಿತಿದೆ. ಇದಕ್ಕೆ ಜನ ಪ್ರತಿನಿಧಿಗಳ ರಕ್ಷೆ ಇರುವುದು ದುರಂತ. ಅಕ್ರಮಕ್ಕಾಗಿ ದಕ್ಷ ಅಧಿಕಾರಿಗಳ ವರ್ಗಾವಣೆ ಮಾಡಿ ತಮಗೆ ಬೇಕಾದವರನ್ನು ನಿಯೋಜಿಸಲಾಗುತ್ತಿದೆ ಎಂದು ಮಂಜುನಾಥ ಪೂಜಾರಿ ಆರೋಪಿಸಿದರು.

ಜನಪ್ರತಿನಿಧಿಗಳು ಸೇರಿ ಸರಕಾರ ಉಡುಪಿ ಜಿಲ್ಲೆಯಲ್ಲಿ ಕೊರೋನ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಆದೇಶ ನೀಡಬೇಕು. ಕೊರೋನ ನಿಯಂತ್ರಣದ ಕ್ವಾರಂಟೈನ್ ಸಹಿತ ಎಲ್ಲಾ ವಿಷಯದಲ್ಲೂ ಸ್ವಷ್ಟವಾದ ನಿಲುವು, ಕಠಿಣ ಆದೇಶ ಹೊರಡಿಸಬೇಕು. ಜನರ ಬದುಕಿ ನಲ್ಲಿ ಚೆಲ್ಲಾಟ ಆಡಬೇಡಿ. ಶೀಘ್ರವಾಗಿ ನೀತಿ ರೂಪಿಸಿ ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಮಂಜುನಾಥ ಪೂಜಾರಿ ಎಚ್ಚರಿಸಿದರು.

ಸುದ್ಧಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಚ್.ಜನಾರ್ದನ್, ಉಪಾಧ್ಯಕ್ಷ ಶೀನಾ ಪೂಜಾರಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಜಾತ ಲಕ್ಷ್ಮಣ್, ಮುದ್ರಾಡಿ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ಪೂಜಾರಿ, ಹಿಂದುಳಿದ ವರ್ಗಗಳ ಅಧ್ಯಕ್ಷ ಶಂಕರ ಶೇರಿಗಾರ್, ಐಟಿ ಸೆಲ್ ಅಧ್ಯಕ್ಷ ಸಂತೋಷ ನಾಯಕ್, ಶಶಿಕಲಾ ಆರ್ ಪಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News