×
Ad

ಕೊಲ್ಲೂರಿನಲ್ಲಿ ಮೂಕಾಂಬಿಕಾ ದೇವಿ ದರ್ಶನ ಪ್ರಾರಂಭ

Update: 2020-06-08 20:43 IST

ಉಡುಪಿ, ಜೂ.8: ರಾಜ್ಯ ಸರಕಾರ ನೀಡಿದ ವಿನಾಯಿತಿಯ ಹಿನ್ನೆಲೆಯಲ್ಲಿ ರಾಜ್ಯ ಮುಂಜರಾಯಿ ಇಲಾಖೆಯ ಅಡಿಯಲ್ಲಿ ಬರುವ ದೇವಸ್ಥಾನಗಳು ಹಾಗೂ ಬಹುಪಾಲು ಇತರ ದೇವಾಲಯಗಳಲ್ಲಿ ಭಕ್ತರಿಗೆ ದೇವರ ದರ್ಶನ ಮಾಡುವ ಅವಕಾಶ ಇಂದಿನಿಂದ ಲಭಿಸಲಾರಂಭಿಸಿದೆ.

ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲೂ ಇಂದಿನಿಂದ ಮೂಕಾಂಬಿಕಾ ದೇವಿಯ ದರ್ಶನ ಪ್ರಾರಂಭವಾಗಿದ್ದು, ಮುಂಜಾವಿನಿಂದಲೇ ಭಕ್ತರು ಸರತಿ ಸಾಲಿನಲ್ಲಿ ಬಂದು ದೇವಿಯ ದರ್ಶನ ಪಡೆದು ಪುಳಕಿತರಾದರು. ಧನ್ಯತೆಯನ್ನು ಅನುಭವಿಸಿದರು.

ಕೋವಿಡ್-19ರ ವಿರುದ್ಧದ ಹೋರಾಟದ ಹಿನ್ನೆಲೆಯಲ್ಲಿ ದೇಶಾದ್ಯಂತ ಲಾಕ್‌ಡೌನ್ ಹೇರಿದಾಗ ಉಳಿದೆಲ್ಲಾ ದೇವಾಲಯಗಳಂತೆ ಕೊಲ್ಲೂರು ಮುಕಾಂಬಿಕಾ ದೇವಾಲಯವನ್ನು ಭಕ್ತರಿಗೆ ಮುಚ್ಚಲಾಗಿತ್ತು. ಇದೀಗ ಬರೋಬ್ಬರಿ 77 ದಿನಗಳ ಬಳಿಕ ಭಕ್ತರಿಗೆ ಮತ್ತೆ ದೇಗುಲದ ಬಾಗಿಲನ್ನು ತೆರೆದು ದೇವಿಯ ದರ್ಶನಕ್ಕೆ ಅವಕಾಶ ನೀಡಲಾಗುತ್ತಿದೆ.

ಈ ಸಂದರ್ಭಕ್ಕಾಗಿ ದೇವಾಲಯವನ್ನು ವಿವಿಧ ಬಗೆಯ, ಬಣ್ಣದ ಹೂವುಗಳಿಂದ ಸಿಂಗರಿಸಲಾಗಿತ್ತು. ದೇಗುಲದ ಪ್ರಾಂಗಣದಲ್ಲಿ ಸಿಬ್ಬಂದಿಗಳು ಸ್ಯಾನಿಟೈಸರ್ ಹಾಗೂ ಥರ್ಮಲ್ ಚೆಕ್‌ಅಪ್ ನಡೆಸುತಿದ್ದರು. ಭಕ್ತರಿಗೆ ದೇಗುಲದ ಧ್ವಜಸ್ತಂಭದವರೆಗೆ ಮಾತ್ರ ಹೋಗಲು ಅವಕಾಶ ನೀಡಲಾಗುತ್ತಿತ್ತು.

ಸಿಬ್ಬಂದಿಗಳು ಯಾರಿಗೂ ಗರ್ಭಗುಡಿಯ ಸಮೀಪ ಹೋಗಲು ಅವಕಾಶ ನೀಡುತ್ತಿರಲಿಲ್ಲ. ದೂರದಿಂದಲೇ ಮೂಕಾಂಬಿಕೆಯ ದರ್ಶನ ಪಡೆದು ನಮಸ್ಕರಿಸುವ ಅವಕಾಶವನ್ನು ಭಕ್ತರಿಗೆ ನೀಡಲಾಗುತ್ತಿದೆ. ಹೀಗಾಗಿ ಯಾರೂ ಶರ್ಟ್ ಮತ್ತು ಬನಿಯನ್ ತೆಗೆಯುವ ಅಗತ್ಯ ಬೀಳುತ್ತಿರಲಿಲ್ಲ.

ದೇವಸ್ಥಾನದ ಸಿಬ್ಬಂದಿಗಳ ಹದ್ದಿನ ಕಣ್ಣಿನಡಿ ಭಕ್ತರು ಮೂಕಾಂಬಿಕಾ ದೇವಿಯ ದರ್ಶನ ಪಡೆದು ನಮಸ್ಕರಿಸಿ ಅಲ್ಲಿಂದ ತೆರಳುತಿ ದ್ದಾರೆ. ಸದ್ಯ ಯಾರಿಗೂ ತೀರ್ಥ ಪ್ರಸಾದ ನೀಡಲಾಗುತ್ತಿಲ್ಲ. ಯಾವುದೇ ಸೇವೆಗೂ ಅವಕಾ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.

ಅಂಬಲಪಾಡಿ, ಮಂದಾರ್ತಿಗಳಲ್ಲಿ ಪ್ರಾರಂಭ: ರಾಜ್ಯ ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಅಂಬಲಪಾಡಿಯ ಶ್ರೀಜನಾರ್ದನ ಮಹಾಕಾಳಿ ದೇವಸ್ಥಾನ, ಕಡಿಯಾಳಿಯ ಶ್ರೀಮಹಿಷಮರ್ದಿನಿ ದೇವಸ್ಥಾನ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಉಡುಪಿಯ ಶ್ರೀಅನಂತೇಶ್ವರ ಹಾಗೂ ಚಂದ್ರವೌಳೀಶ್ವರ ದೇವಸ್ಥಾನಗಳಲ್ಲೂ ಸರಕಾರದ ಮಾರ್ಗದರ್ಶಿ ಸೂತ್ರಗಳಿ ಗನುಸಾರವಾಗಿ, ಎಲ್ಲಾ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸಾಕಷ್ಟು ಸಂಖ್ಯೆಯ ಭಕ್ತರು ಇಲ್ಲಿ ದೇವರ ದರ್ಶನ ಪೆದರು.

ಆದರೆ ಉಡುಪಿಯ ಶ್ರೀಕೃಷ್ಣ ಮಠ ಸೇರಿದಂತೆ ಕೆಲವು ದೇವಸ್ಥಾನಗಳಲ್ಲಿ ಇಂದು ದೇವರ ದರ್ಶನಕ್ಕೆ ಅವಕಾಶ ನೀಡಲಾಗಿಲ್ಲ. ಮುಂದಿನ ತಿಂಗಳಿನಿಂದ ಶ್ರೀಕೃಷ್ಣ ಮಠಕ್ಕೆ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಪರ್ಯಾಯ ಅದಮಾರು ಮಠದ ಶ್ರೀಈಶಪ್ರಿಯ ತೀರ್ಥರು ಪ್ರಕಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News