×
Ad

ದ.ಕ.: ಬಾಲಕ ಸಹಿತ ಮೂವರಿಗೆ ಕೊರೋನ ಸೋಂಕು ದೃಢ

Update: 2020-06-08 21:17 IST

ಮಂಗಳೂರು, ಜೂ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ಮತ್ತೆ ಮೂವರಿಗೆ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಮೂವರು ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 185ಕ್ಕೇ ಏರಿಕೆಯಾಗಿದೆ.

ಮುಂಬೈನಿಂದ ಮೇ 16ರಂದು ಆಗಮಿಸಿದ್ದ 52 ವರ್ಷದ ವ್ಯಕ್ತಿಯನ್ನು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಕ್ವಾರಂಟೈನ್ ಅವಧಿ ಬಳಿಕ ಇವರು ಮೂಡುಬಿದಿರೆಗೆ ತೆರಳಿದ್ದರು. ಇವರ ಗಂಟಲು ದ್ರವ ಮಾದರಿ ಪರೀಕ್ಷಾ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಇವರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮೇ 14ರಂದು ಮುಂಬೈನಿಂದ ಬಂದಿದ್ದ ಎಂಟು ವರ್ಷದ ಬಾಲಕನನ್ನು ಉಡುಪಿಯಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಬಳಿಕ ಮಂಗಳೂರಿಗೆ ಆಗಮಿಸಿದ್ದ ಇವರ ಗಂಟಲು ದ್ರವ ಮಾದರಿಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟ ಹಿನ್ನೆಲೆ ವೆನ್ಲಾಕ್‌ಗೆ ದಾಖಲಿಸಲಾಗಿದೆ.

ಜೂ.1ರಂದು ದುಬೈನಿಂದ ಆಗಮಿಸಿದ್ದ 23 ವರ್ಷದ ಯುವಕನನ್ನು ನಗರದ ಖಾಸಗಿ ಹೊಟೇಲ್‌ನಲ್ಲಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಇವರ ಗಂಟಲು ದ್ರವ ಮಾದರಿ ಪರೀಕ್ಷೆಯ ವರದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದು, ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ಮೂವರು ಡಿಸ್ಚಾರ್ಜ್: ಕೊರೋನ ಸೋಂಕಿತರು ನಿತ್ಯವೂ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಸೋಮವಾರ ಮತ್ತೆ ಮೂವರು ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಇದುವರೆಗೆ 99 ಮಂದಿ ಗುಣಮುಖರಾದಂತಾಗಿದೆ. ಸದ್ಯ 89 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುರಭವನದಲ್ಲಿ ಹೆಲ್ಪ್‌ಡೆಸ್ಕ್ ಆರಂಭ: ಡಿಸಿ

ವಲಸೆ ಕಾರ್ಮಿಕರು ಸ್ವಂತ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಜಿಲ್ಲಾ ಮಟ್ಟದಲ್ಲಿ ನೋಂದಣಿ ಕೇಂದ್ರವನ್ನು (ಹೆಲ್ಪ್ ಡೆಸ್ಕ್) ನಗರದ ಪುರಭವನದಲ್ಲಿ ತೆರೆಯಲಾಗಿದೆ. ಇಲ್ಲಿ ವಲಸೆ ಕಾರ್ಮಿಕರು ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

***

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News