×
Ad

ಸೋಮವಾರವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Update: 2020-06-08 21:46 IST

ಹೊಸದಿಲ್ಲಿ, ಜೂ.8: ಸರಕಾರಿ ಸ್ವಾಮ್ಯದ ತೈಲ ಮಾರಾಟ ಕಂಪೆನಿಗಳು ತೈಲ ಬೆಲೆ ದೈನಂದಿನ ಪರಿಷ್ಕರಣೆ ಪುನರಾರಂಭಿಸಿದ ಬಳಿಕ ಪೆಟ್ರೋಲ್, ಡೀಸೆಲ್ ಬೆಲೆ ಸತತ ಎರಡನೇ ದಿನವಾದ ಸೋಮವಾರವೂ ಏರಿಕೆಯಾಗಿದೆ. ಸೋಮವಾರ ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್‌ಗೆ ತಲಾ 60 ಪೈಸೆ ಹೆಚ್ಚಳವಾಗಿದೆ ಎಂದು ಮೂಲಗಳು ತಿಳಿಸಿವೆ.

ರವಿವಾರ ಪೆಟ್ರೋಲ್, ಮತ್ತು ಡೀಸೆಲ್ ಬೆಲೆಯಲ್ಲಿ ಲೀಟರ್‌ಗೆ 60 ಪೈಸೆಯಷ್ಟು ಹೆಚ್ಚಿಸಲಾಗಿತ್ತು. ಇದರೊಂದಿಗೆ ಎರಡು ದಿನದಲ್ಲಿ 1.20 ರೂ. ಬೆಲೆ ಏರಿಕೆಯಾದಂತಾಗಿದೆ. ಸೋಮವಾರದ ಬೆಲೆ ಏರಿಕೆಯ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ 72.46 ರೂ, ಡೀಸೆಲ್ ಬೆಲೆ ಲೀಟರ್ಗೆ 70.59 ರೂ. ಆಗಿದೆ. ಮಾರ್ಚ್ 14ರಂದು ಕೇಂದ್ರ ಸರಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 3 ರೂ. ಹೆಚ್ಚಿಸಿದ ಹಿನ್ನೆಲೆಯಲ್ಲಿ ತೈಲ ಮಾರಾಟ ಕಂಪೆನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಶನ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಗಳು ದಿನಂಪ್ರತಿ ತೈಲ ದರ ಪರಿಷ್ಕರಣೆಯನ್ನು ಕೈಬಿಟ್ಟಿತ್ತು.

ಆದರೆ ಎಟಿಎಫ್ (ವಿಮಾನದಲ್ಲಿ ಬಳಸುವ ಇಂಧನ) ಮತ್ತು ಎಲ್‌ಪಿಜಿ (ಅಡುಗೆ ಅನಿಲ)ದ ಬೆಲೆಯಲ್ಲಿ ಪ್ರತೀ 15 ದಿನಕ್ಕೊಮ್ಮೆ ಪರಿಷ್ಕರಿಸಲಾಗುತ್ತಿದೆ. ಮೇ 6ರಂದು ಅಬಕಾರಿ ಸುಂಕವನ್ನು ಪೆಟ್ರೋಲ್ ಲೀಟರ್‌ಗೆ 10 ರೂ. ಮತ್ತು ಡೀಸೆಲ್ ಲೀಟರ್‌ಗೆ 13 ರೂ.ಯಷ್ಟು ಹೆಚ್ಚಿಸಿದ್ದು ಇದರಿಂದ ಸರಕಾರಕ್ಕೆ 2 ಲಕ್ಷ ಕೋಟಿ ರೂ. ಹೆಚ್ಚುವರಿ ಆದಾಯ ದೊರಕಿದೆ. ಆದರೆ ಜಾಗತಿಕ ಕಚ್ಛಾತೈಲ ಬೆಲೆಗಳು ಕುಸಿದಿದ್ದ ಹಿನ್ನೆಲೆಯಲ್ಲಿ ಕಂಪೆನಿಗಳು ಈ ಏರಿಕೆಯ ಹೊರೆಯನ್ನು ಗ್ರಾಹಕರಿಗೆ ವರ್ಗಾಯಿಸಿರಲಿಲ್ಲ. ಭಾರತವು ತನ್ನ ತೈಲ ಬೇಡಿಕೆಯ 85% ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News