ಹೊರರಾಜ್ಯಗಳಿಂದ ಬಂದವರ ಸ್ಯಾಂಪಲ್ ಟೆಸ್ಟ್ ಮುಕ್ತಾಯ : ಜಿಲ್ಲಾಧಿಕಾರಿ ಜಿ.ಜಗದೀಶ್
ಉಡುಪಿ, ಜೂ.8: ಮುಂಬೈ ಮಹಾರಾಷ್ಟ್ರ ಸೇರಿ ಹೊರರಾಜ್ಯಗಳಿಂದ ಮೇ ತಿಂಗಳ ಆರಂಭದಲ್ಲಿ ಉಡುಪಿ ಜಿಲ್ಲೆಗೆ ಆಗಮಿಸಿದವರ ಕೊರೋನ ಸೋಂಕಿಗಾಗಿ ಗಂಟಲುದ್ರವ ಮಾದರಿಗಳ ಪರೀಕ್ಷೆ ಇಂದು ಸಂಜೆಗೆ ಮುಕ್ತಾಯಗೊಂಡಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.
ಇದರೊಂದಿಗೆ ಪಾಸಿಟಿವ್ ಬಂದು ಜಿಲ್ಲೆಯ ವಿವಿಧ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದ ಒಟ್ಟು 113 ಮಂದಿಯ ಸ್ಯಾಂಪಲ್ ಟೆಸ್ಟ್ ಇಂದು ನೆಗೆಟಿವ್ ಬಂದಿದ್ದು, ಇವರನ್ನು ಮನೆಗೆ ಕಳುಹಿಸುವ ಪ್ರಕ್ರಿಯೆ ಚಾಲನೆ ಯಲ್ಲಿದೆ. ಇವರೆಲ್ಲರಿಗೂ ನಾನು ಶುಭಹಾರೈಸುತ್ತೇನೆ. ಅವರು ಇನ್ನೂ 14 ದಿನಗಳ ಕಾಲ ಮನೆಯಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರಬೇಕಾಗುತ್ತದೆ. ಈ ಬಗ್ಗೆ ವೈದ್ಯರು ಅವರಿಗೆ ವಿವರಿುತ್ತಾರೆ ಎಂದು ಜಗದೀಶ್ ತಿಳಿಸಿದರು.
ಈ ಮೂಲಕ ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 387 ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದು, 559 ಮಂದಿಯಲ್ಲಿ ಮಾತ್ರ ಸೋಂಕು ಸಕ್ರೀಯವಾಗಿದೆ ಎಂದವರು ವೀಡಿಯೊ ಸಂದೇಶದಲ್ಲಿ ತಿಳಿಸಿದ್ದಾರೆ.
ಕೊರೋನ ಪಾಸಿಟಿವ್ ಬಂದು ಈಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವರಿಗೆ ಏಳು ದಿನಗಳ ಬಳಿಕ ಟೆಸ್ಟ್ ನಡೆಸಲಾಗುತ್ತದೆ. ಅಂಥವರನ್ನು ಮನೆಗೆ ಕಳುಹಿಸಲಾಗುತ್ತದೆ. ಆಗಲೂ ಪಾಸಿಟಿವ್ ಬಂದವರಿಗೆ ಮತ್ತೆ ಮೂರು ದಿನಗಳಿಗೆ ಮತ್ತೊಂದು ಪರೀಕ್ಷೆ ನಡೆಸಿ ನೆಗೆಟಿವ್ ಬಂದರೆ ಮನೆಗೆ ಕಳುಹಿಸಲಾ ಗುವುದು ಎಂದವರು ವಿವರಿಸಿದರು.