×
Ad

ಕಾಪುವಿನಲ್ಲಿ ಕಾಲುವೆಗೆ ತಡೆಗೋಡೆ: ಕೃಷಿಕರ ಅಸಮಾಧಾನ; ಕಾಮಗಾರಿ ತಡೆ

Update: 2020-06-08 22:40 IST

ಕಾಪು: ಕಾಪುವಿನ ರಾಮನಗರದಲ್ಲಿ ಮಳೆ ನೀರು ಹರಿದು ಹೋಗುವ ಕಾಲುವೆಗೆ ನಿರ್ಮಿಸುತ್ತಿರುವ ತಡೆಗೋಡೆ ಕಾಮಗಾರಿ ಯಿಂದ ಕೃಷಿ ಚಟುವಟಿಕೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯರು ಕಾಮಗಾರಿಗೆ ತಡೆಯೊಡ್ಡಿದ ಘಟನೆ ಸೋಮವಾರ ಕಾಪು ಪುರಸಭಾ ವ್ಯಾಪ್ತಿಯ ಪಡು ಗ್ರಾಮದ ಬೀಚ್ ರಸ್ತೆಯಲ್ಲಿ ನಡೆದಿದೆ.

ಸಮುದ್ರಕ್ಕೆ ನೀರು ಹರಿದು ಹೋಗುತಿದ್ದ ತೋಡಿಗೆ ತಡೆಗೋಡೆ ನಿರ್ಮಾಣವಾಗುತ್ತಿದೆ. ಈ ತೋಡಿಗೆ ತಡೆಗೋಡೆಯೊಂದು ನಿರ್ಮಾಣವಾಗುತಿದ್ದು, ಇದರಿಂದ ತೋಡಿನ ಗಾತ್ರ ಕಿರಿದಾಗಿ ನೀರು ಹರಿದು ಹೋಗದೆ ಕೃಷಿ ಭೂಮಿಗೆ ನೀರು ನುಗ್ಗಿ ಕೃಷಿ ಚಟುವಟಿಕೆಗೆ ಸಮಸ್ಯೆಯಾಗುತ್ತದೆ. ಈ ತೋಡನ್ನು ಮೂರು ಮೀಟರ್ ಬಿಟ್ಟು ತಡೆಗೋಡೆ ನಿರ್ಮಿಸಬೇಕಿದ್ದರೂ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಕಾಮಗಾರಿ ನಡೆಸಲಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಶಾಸಕರ ವಿರುದ್ಧ ಅಸಮಾಧಾನ: ಈ ಕಾಮಗಾರಿ ತಡೆಹಿಡಿಯುವಂತೆ ಶಾಸಕ ಲಾಲಾಜಿ ಮೆಂಡನ್, ಜಿಲ್ಲಾಧಿಕಾರಿ, ತಹಶೀಲ್ದಾರ್ ಹಾಗೂ ಸಹಾಯಕ ಕಮೀಶನರ್ ಅವರಿಗೆ ಮನವಿಯನ್ನು ಸಲ್ಲಿಸಿದ್ದರು. ಆದರೂ ಕಾಮಗಾರಿ ಮುಂದುವರಿದಿತ್ತು. ಕಳೆದ ವಾರ ಈ ಕಾಮಗಾರಿ ನಡೆಯುತಿದ್ದ ವೇಳೆ ಅಲ್ಲಿದ್ದ ಕಾಪು ಶಾಸಕ ಲಾಲಾಜಿ ಆರ್. ಮೆಂಡನ್ ಅವರನ್ನು  ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದರು. ಈ ಕಾಮಗಾರಿಯಿಂದ ಕೃಷಿ ಚಟುವಟಕೆಗೆ ತೊಂದರೆ ಯಾಗುವುದರಿಂದ ಕಾಮಗಾರಿಗೆ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದ್ದರು. 

ಸೋಮವಾರ ಮತ್ತೆ ಕಾಮಗಾರಿ ಪ್ರಾರಂಭಿಸಿ ತೋಡಿನ ಮಧ್ಯಭಾಗದಲ್ಲಿ ತಡೆಗೋಡೆಯೊಂದನ್ನು ನಿರ್ಮಿಸುತ್ತಿರುವುದರಿಂದ ಆಕ್ರೋಶಿತರಾದ ಸ್ಥಳೀಯ 50ಕ್ಕೂ ಅಧಿಕ ಸಂಖ್ಯೆಯಲ್ಲಿ ಸೇರಿದ ಕೃಷಿಕರು ಸೋಮವಾರ ಸ್ಥಳದಲ್ಲಿ ಜಮಾಯಿಸಿ ಕಾಮಗಾರಿಗೆ ತಡೆಯೊಡ್ಡಿದರು. ನಾವು ನೂರಾರು ಎಕ್ರೆ ಜಾಗದಲ್ಲಿ ಕೃಷಿ ನಡೆಸುತಿದ್ದೇವೆ. ಆದರೆ ಈ ಕಾಮಗಾರಿಯಿಂದ ನಮ್ಮ ಕೃಷಿ ಭೂಮಿಗೆ ತೊಂದರೆಯಾಗಲಿದೆ. ಯಾವುದೇ ಕಾರಣಕ್ಕೂ ಈ ಕಾಮಗಾರಿ ನಡೆಸಲು ನಾವು ಬಿಡುವುದಿಲ್ಲ ಎಂದು ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದರು. 

ಗೀತಾ, ಸುಹಾಸಿನಿ, ವಿಜಯ, ಸಂತೋಷ್, ಕಿಶೋರ್, ಸಂದೇಶ್, ಪೂರ್ಣಿಮಾ, ಬೇಬಿ,ರಘುರಾಮ, ಶೇಖರ ಶೆಟ್ಟಿ, ಗಣೇಶ್, ಭಾಸ್ಕರ್ ಹಾಗು ಹಲವಾರು ಕೃಷಿಕರು ಸ್ಥಳದಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News