×
Ad

‘ಕ್ರೈಸ್ಟ್‌ಚರ್ಚ್’ ಮಾದರಿಯಲ್ಲಿ ಮುಸ್ಲಿಮರ ಹತ್ಯೆಗೆ ಸಂಚು: ಶಂಕಿತನ ಬಂಧನ

Update: 2020-06-08 23:10 IST

ಬರ್ಲಿನ್, ಜೂ.8: ನ್ಯೂಜಿಲೆಂಡ್‌ನ ಕ್ರೈಸ್ಟ್ ಚರ್ಚ್‌ನಲ್ಲಿ 2019ರಲ್ಲಿ ಎರಡು ಮಸೀದಿಗಳ ಮೇಲೆ ನಡೆದ ದಾಳಿಯಿಂದ ಪ್ರೇರಿತನಾಗಿ ಮುಸ್ಲಿಂ ಸಮುದಾಯದ ಸದಸ್ಯರನ್ನು ಹತ್ಯೆಗೈಯಲು ಸಂಚು ರೂಪಿಸಿದ್ದನೆಂಬ ಶಂಕೆಯಲ್ಲಿ ಜರ್ಮನಿಯ ಪೊಲೀಸರು ಸೋಮವಾರ 21 ವರ್ಷ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ.

 ಆರೋಪಿಯು ಜರ್ಮನಿಯ ಹಿಲ್ಡೆಶಿಮ್ ನಗರದವನಾಗಿದ್ದು ‘ಅನಾಮಧೇಯ ಇಂಟರ್‌ನೆಟ್ ಚಾಟ್’ ಮೂಲಕ ತನ್ನ ದಾಳಿ ಸಂಚನ್ನು ಬಹಿರಂಗಪಡಿಸಿದ್ದನೆಂದು ಸಿಲ್ಲೆ ನಗರದ ರಾಜ್ಯ ಪ್ರಾಸಿಕ್ಯೂಟರ್ ಕಾರ್ಯಾಲಯ ತಿಳಿಸಿದೆ.

ಜಾಗತಿಕ ಮಟ್ಟದಲ್ಲಿ ಮಾಧ್ಯಮಗಳು ಗಮನವನ್ನು ಸೆಳೆಯುವ ಉದ್ದೇಶದಿಂದ ತಾನು ಹಲವಾರು ಮಂದಿಯನ್ನು ಹತ್ಯೆಗೈಯುವ ಸಂಚನ್ನು ಹಲವಾರು ಸಮಯದಿಂದ ಹೆಣೆಯುತ್ತಿದ್ದನೆಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

 ಶಂಕಿತ ಆರೋಪಿಯು ತನ್ನ ಇಂಟರ್‌ನೆಟ್ ಚಾಟ್‌ನಲ್ಲಿ 2019ರಲ್ಲಿ ನ್ಯೂಝಿಲ್ಯಾಂಡ್‌ನ ಕ್ರೈಸ್ಟ್‌ಚರ್ಚ್‌ನ ಎರಡು ಮಸೀದಿಗಳಲ್ಲಿ 51 ಮಂದಿಯನ್ನು ಹತ್ಯೆಗೈದ ಘಟನೆಯನ್ನು ಪ್ರಸ್ತಾವಿಸಿದ್ದನು ಹಾಗೂ ಅದೇ ಮಾದರಿಯ ದಾಳಿಯನ್ನು ನಡೆಸಲು ಆತ ಅಂದಾಜಿಸಿದ್ದನು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ. ಮುಸ್ಲಿಮರ ಹತ್ಯಾಕಾಂಡವೇ ಆತನ ಗುರಿಯಾಗಿತ್ತು ಎಂದು ಪ್ರಾಸಿಕ್ಯೂಟರ್‌ಗಳು ಹೇಳಿದ್ದಾರೆ.

ಶಂಕಿತ ಮನೆಯಿಂದ ಪೊಲೀಸರು ಶಸ್ತ್ರಾಸ್ತ್ರಗಳು ಹಾಗೂ ಬಲಪಂಥೀಯ ಉಗ್ರವಾದಿ ಅಂಶಗಳನ್ನು ಒಳಗೊಂಡ ಇ-ಫೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News