ಲಡಾಕ್ ಗಡಿ ಉದ್ವಿಗ್ನತೆ ಬಿಕ್ಕಟ್ಟು ವಿವಾದವಾಗಿ ಉಲ್ಬಣಿಸದಂತೆ ನೋಡಿಕೊಳ್ಳಬೇಕಾಗಿದೆ: ಚೀನಾ
Update: 2020-06-08 23:28 IST
ಬೀಜಿಂಗ್,ಜೂ.8: ಪೂರ್ವ ಲಡಾಕ್‌ನ ವಾಸ್ತವ ಗಡಿನಿಯಂತ್ರಣ ರೇಖೆ (ಎಲ್‌ಎಸಿ)ಯುದ್ದಕ್ಕೂ ಶಾಂತಿ ಕಾಪಾಡುವುದಕ್ಕಾಗಿ ಜಂಟಿಯಾಗಿ ಶ್ರಮಿಸಲು ಚೀನಾ ಹಾಗೂ ಭಾರತವು ನಿರ್ಧರಿಸಿವೆ. ಉಭಯ ದೇಶಗಳ ನಡುವೆ ಉದ್ಭವಿಸಿರುವ ಭಿನ್ನಮತವು, ವಿವಾದವಾಗಿ ಉಲ್ಬಣಗೊಳ್ಳದಂತೆ ನೋಡಿಕೊಳ್ಳಬೇಕೆಂಬ ಬಗ್ಗೆ ಮಾತುಕತೆಯಲ್ಲಿ ಎರಡೂ ತಂಡಗಳ ನಡುವೆ ಸಹಮತವೇರ್ಪಟ್ಟಿದೆ ಎಂದು ಉನ್ನತ ಚೀನಿ ಅಧಿಕಾರಿಗಳು ತಿಳಿಸಿದ್ದಾರೆ.
ದ್ವಿಪಕ್ಷೀಯ ಒಪ್ಪಂದಗಳಿಗೆ ಅನುಗುಣವಾಗಿ ಭಾರತ ಹಾಗೂ ಚೀನಾ ನಡುವಿನ ಪ್ರಸಕ್ತ ಗಡಿಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಸುವ ನಿಟ್ಟಿನಲ್ಲಿ ಉಭಯದೇಶಗಳ ಮಿಲಿಟರಿ ಅಧಿಕಾರಿಗಳ ಮಧ್ಯೆ ಸುದೀರ್ಘ ಮಾತುಕತೆ ನಡೆದ ಎರಡು ದಿನಗಳ ಬಳಿಕ ಚೀನಾದ ವಿದೇಶಾಂಗ ಸಚಿವಾಲಯ ವಕಾರೆ ಹುವಾ ಚುನಿಯಾಂಗ್ ಈ ಹೇಳಿಕೆ ನೀಡಿದ್ದಾರೆ.
ಗಡಿಯುದ್ದಕ್ಕೂ ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಹಾಗೂ ಉತ್ತಮ ವಾತಾವರಣವನ್ನು ಸೃಷ್ಟಿಸಲು ಇತ್ತಂಡಗಳು ಶ್ರಮಿಸಲಿದೆಯೆಂದು ಆಕೆ ಹೇಳಿದರು.