ಮಹಾರಾಷ್ಟ್ರದಿಂದ ಆಗಮಿಸುವವರಿಗೆ 14 ದಿನಗಳ ಹೋಂ ಕ್ವಾರಂಟೈನ್, ಮನೆ ಸೀಲ್‌ಡೌನ್ : ಸಚಿವ ಶ್ರೀರಾಮುಲು

Update: 2020-06-09 14:04 GMT

ಉಡುಪಿ, ಜೂ.9: ಇಂದಿನಿಂದ ಪ್ರಾರಂಭಿಸಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿದವರಿಗೆ ಸಾಂಸ್ಥಿಕ ಕ್ವಾರಂಟೈನ್ ಇರುವುದಿಲ್ಲ. ಅವರನ್ನು ನೇರವಾಗಿ 14 ದಿನಗಳ ಹೋಮ್ ಕ್ವಾರಂಟೈನ್‌ನಲ್ಲಿರಿಸಿ, ವ್ಯಕ್ತಿ ಇರುವ ಮನೆಯನ್ನು ಸಂಪೂರ್ಣವಾಗಿ ಸೀಲ್‌ಡೌನ್ ಮಾಡಲಾಗುವುದು ಎಂದು ರಾಜ್ಯ ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ.

ಕೋವಿಡ್-19 ಕುರಿತು ಉಡುಪಿ ಜಿಲ್ಲೆಯಲ್ಲಿ ಕೈಗೊಂಡ ಕುರಿತು ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳು ಸೇರಿದಂತೆ ಅಧಿಕಾರಿಗಳೊಂದಿಗೆ ಮಣಿಪಾಲದ ಜಿಲ್ಲಾದಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಬಳಿಕ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುತಿದ್ದರು.

ಈವರೆಗೆ ಮುಂಬೈ ಸೇರಿದಂತೆ ಮಹಾರಾಷ್ಟ್ರ ರಾಜ್ಯದಿಂದ ಕರ್ನಾಟಕಕ್ಕೆ ಬಂದವರು ಒಂದು ವಾರ ಕಾಲದ ಸಾಂಸ್ಥಿಕ ಕ್ವಾರಂಟೈನ್ ಪೂರೈಸಿ, ಯಾವುದೇ ಕೊರೋನ ರೋಗಲಕ್ಷಣಗಳಿಲ್ಲದಿದ್ದಲ್ಲಿ ಹೋಮ್ ಕ್ವಾರಂಟೈನ್‌ನಲ್ಲಿರಬೇಕಿತ್ತು. ಇದೀಗ ಅವರನ್ನು ನೇರವಾಗಿ ಹೋಮ್ ಕ್ವಾರಂಟೈನ್‌ಗೆ ಕಳುಹಿಸಿ ಅವರಿದ್ದ ಮನೆಯನ್ನು ಸೀಲ್‌ಡೌನ್ ಮಾಡಲು ಅವಕಾಶ ನೀಡಲಾಗಿದೆ. ಇದು ರಾಜ್ಯಮಟ್ಟದ ನಿರ್ಧಾರವಾಗಿದ್ದು, ಈ ಬಗ್ಗೆ ಸರಕಾರಿ ಆದೇಶ ಹೊರಡಿಸಲಾಗುವುದು ಸಚಿವ ಶ್ರೀರಾಮುಲು ತಿಳಿಸಿದರು.

ವ್ಯಕ್ತಿಯ ಮನೆಯನ್ನು ಸೀಲ್ ಮಾಡಿದ ಬಳಿಕ ಅವರು ಮನೆಯಲ್ಲೇ ಇರಬೇಕು. ಅವರು ನಿಯಮ ಉಲ್ಲಂಘಿಸಿ ಹೊರಗೆಲ್ಲಿಯಾದರೂ ತಿರುಗಲು ಬಂದರೆ ಅವರ ಮೇಲೆ ಪ್ರಕರಣ ದಾಖಲಿಸಿ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿರಿಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.
ಅವರ ಮೇಲೆ ನಿಗಾ ಇಡಲು ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆ ಯರು ಇರುವರು. ಸೀಲ್‌ಡೌನ್‌ನಿಂದ ಹೊರಬಂದರೆ ಕೇಸು ದಾಖಲಿಸಿ ಪೊಲೀಸ್ ಹಾಗೂ ಹೋಮ್‌ಗಾರ್ಡ್‌ಗಳನ್ನು ಇರಿಸುತ್ತೇವೆ. ತಮ್ಮ ಜಿಲ್ಲೆಯ ಕುರಿತಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸಂಪೂರ್ಣ ಅಧಿಕಾರವಿರುತ್ತದೆ ಎಂದರು.

ಸಂಬಂಧಿತ ವ್ಯಕ್ತಿ ಅಪಾರ್ಟ್‌ಮೆಂಟ್‌ನಲ್ಲಿದ್ದರೆ, ಇಡೀ ಅಪಾರ್ಟ್‌ಮೆಂಟ್ ನ್ನು ಸೀಲ್ ಮಾಡುವುದಿಲ್ಲ. ಆ ಒಂದು ಮನೆಯನ್ನು ಮಾತ್ರ ಸೀಲ್ ಮಾಡಲಾಗುವುದು. ಆದರೆ ಪಾಸಿಟಿವ್ ಬಂದರೆ ಇಡೀ ಕಟ್ಟಡವೇ ಸೀಲ್‌ಡೌನ್ ಆಗಲಿದೆ ಎಂದು ರಾಮುಲು ವಿವರಿಸಿದರು.

ಉಡುಪಿಯಲ್ಲಿ ಇದುವರೆಗೆ 946 ಪಾಸಿಟಿವ್ ಪ್ರಕರಣಗಳು ಕಂಡುಬಂದಿ ದ್ದರೂ, ಸೋಂಕು ಸಮುದಾಯಕ್ಕೆ ಹರಡಿಲ್ಲ. ಪ್ರತಿ ಜಿಲ್ಲೆಯಲ್ಲಿ ಕೋವಿಡ್-19 ವಿರುದ್ಧ ಕೈಗೊಂಡ ಕ್ರಮಗಳ ಕುರಿತು ಪರಿಶೀಲಿಸಲು ರಾಜ್ಯ ಪ್ರವಾಸದಲ್ಲಿದ್ದು, ಈಗಾಗಲೇ 29 ಜಿಲ್ಲೆಗಳನ್ನು ಮುಗಿಸಿ ಮುಂದೆ ಮಡಿಕೇರಿಗೆ ತೆರಳುತ್ತಿರು ವುದಾಗಿ ಅವರು ಹೇಳಿದರು.

ಕೊರೋನ ಸೋಂಕಿಗೆ ಈಗ ಎಲ್ಲಾ ಕಡೆಗಳಲ್ಲಿ ಉಚಿತ ಚಿಕಿತ್ಸೆ ನೀಡಲಾಗು ತ್ತಿದೆ. ಯಾರೇ ಆದರೂ ಇದಕ್ಕೆ ಹಣ ಪಡೆದರೆ ಅವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ಆರೋಗ್ಯ ಸಚಿವರು ಎಚ್ಚರಿಸಿದರು.

ಜಿಲ್ಲಾಸ್ಪತ್ರೆ ಮೇಲ್ದರ್ಜೆಗೆ: ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆಯನ್ನು 250 ಬೆಡ್‌ಗಳ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲಾಗುವುದು. ಸಿಬ್ಬಂದಿಗಳು ಸೇರಿದಂತೆ ಅದಕ್ಕೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ನೀಡಲಾಗುವುದು. ಕಾರ್ಕಳ ಹಾಗೂ ಕುಂದಾಪುರದ ಕೋವಿಡ್ ಆಸ್ಪತ್ರೆಗಳಿಗೂ ಅಗತ್ಯವಿರುವ ಸೌಲಭ್ಯ ನೀಡಲಾಗುವುದು ಎಂದರು.

ಇದರೊಂದಿಗೆ ಕಾಪು, ಬ್ರಹ್ಮಾವರ ಹಾಗೂ ಬೈಂದೂರಿನ ಸಮುದಾಯ ಆರೋಗ್ಯ ಕೇಂದ್ರಗಳನ್ನು ತಾಲೂಕು ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಶ್ರೀರಾಮುಲು ಹೇಳಿದರು.

ಬಿ.ಆರ್.ಶೆಟ್ಟಿ ಆಸ್ಪತ್ರೆಗೆ ವೈದ್ಯರು: ಉಡುಪಿಯ ಸರಕಾರಿ ಕೂಸಮ್ಮ ಶಂಭುಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ತಜ್ಞರ ವೈದ್ಯರನ್ನು ನೇಮಿಸುವಂತೆ ಬಿ.ಆರ್.ಶೆಟ್ಟಿ ಕಂಪೆನಿಯಿಂದ ಬೇಡಿಕೆ ಬಂದಿದ್ದು, ಈಗಾಗಲೇ ಇವುಗಳನ್ನು ನೀಡಲಾಗಿದೆ. ಉಳಿದ ಬೇಡಿಕೆಗಳ ಕುರಿತು ಅವರನ್ನು ಕರೆದು ಮಾತನಾಡುತ್ತೇನೆ ಎಂದು ಶ್ರೀರಾಮುಲು ಹೇಳಿದರು.

ಅಲ್ಲದೇ ಈ ಆಸ್ಪತ್ರೆಯ ಕುರಿತಂತೆ ಸಭೆಯೊಂದನ್ನು ಕರೆದು ಎಲ್ಲಾ ವಿಷಯಗಳ ಕುರಿತು ಚರ್ಚಿಸುವುದಾಗಿಯೂ ರಾಮುಲು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News