×
Ad

ಅರ್ನಬ್ ಗೋಸ್ವಾಮಿಗೆ ಮುಂಬೈ ಪೊಲೀಸ್ ಸಮನ್ಸ್

Update: 2020-06-09 15:15 IST

ಮುಂಬೈ: ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ಇಲ್ಲಿನ ಪೈಧೋನಿ ಠಾಣೆಯಲ್ಲಿ ದಾಖಲಾಗಿರುವ ದೂರಿಗೆ ಸಂಬಂಧಿಸಿದಂತೆ ಅವರನ್ನು ವಿಚಾರಣೆಗೆ ಒಳಪಡಿಸಲು ಜೂನ್ 10ರಂದು ಠಾಣೆಯಲ್ಲಿ ಹಾಜರಾಗುವಂತೆ ಸಮನ್ಸ್ ಕಳುಹಿಸಲಾಗಿದೆ.

ಅರ್ನಬ್ ಅವರು ತಮ್ಮ ಎಪ್ರಿಲ್ 29ರ ಟಿವಿ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ದ್ವೇಷದ ಭಾವನೆ ಮೂಡಿಸಿ ಮತೀಯ ಸಾಮರಸ್ಯ ಕದಡಲು ಯತ್ನಿಸಿದ್ದಾರೆಂದು ಆರೋಪಿಸಿ ರಾಝಾ ಎಜುಕೇಶನಲ್ ವೆಲ್ಫೇರ್ ಸೊಸೈಟಿಯ ಇರ್ಫಾನ್ ಅಬೂಬಕ್ಕರ್ ಎಂಬವರು ಮೇ 2ರಂದು ದೂರು ಸಲ್ಲಿಸಿದ್ದರು. ಎಪ್ರಿಲ್‍ನಲ್ಲಿ ಮುಂಬೈಯ ಬಾಂದ್ರಾ ನಿಲ್ದಾಣದ ಸಮೀಪ ವಲಸಿಗ ಕಾರ್ಮಿಕರ ಜಮಾವಣೆ ಸಂಬಂಧ ಅರ್ನಬ್ ತಮ್ಮ ವಿವಾದಾಸ್ಪದ ಹೇಳಿಕೆ ನೀಡಿದ್ದರು.

ನಾಳೆ ರಿಪಬ್ಲಿಕ್ ಟಿವಿಯ ಮುಖ್ಯ ಆರ್ಥಿಕ ಅಧಿಕಾರಿ ಎಸ್ ಸುಂದರಂ ಅವರಿಗೂ ವಿಚಾರಣೆಗೆ ಹಾಜರಾಗಲು ಸಮನ್ಸ್ ನೀಡಲಾಗಿದೆ ಎಂದು ಮುಂಬೈ ಡಿಸಿಪಿ ಪ್ರಣಯ್ ಅಶೋಕ್ ಹೇಳಿದ್ದಾರೆ.

ಈ ಪ್ರಕರಣ ಸಂಬಂಧ ಅರ್ನಬ್ ವಿರುದ್ಧ ಐಪಿಸಿಯ  ಸೆಕ್ಷನ್ 153, ಸೆಕ್ಷನ್ 295ಎ, 500, 505(2) ಹಾಗೂ 120(ಬಿ) ಅನ್ವಯ ಪ್ರಕರಣ ದಾಖಲಾಗಿದೆ. ಸುಪ್ರೀಂ ಕೋರ್ಟ್ ಈ ಪ್ರಕರಣವನ್ನು ಮುಂಬೈ ಪೊಲೀಸರಿಂದ ಸಿಬಿಐಗೆ ಹಸ್ತಾಂತರಿಸಲು ಮೇ 19ರಂದು ನಿರಾಕರಿಸಿತ್ತು.

ಪಾಲ್ಘರ್ ಗುಂಪು ಥಳಿತ ಪ್ರಕರಣ ಕುರಿತಾದ ಟಿವಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯನ್ನು ನಿಂದಿಸಿದ ಪ್ರಕರಣ ಸಂಬಂಧ ಅರ್ನಬ್ ಅವರನ್ನು ಎಪ್ರಿಲ್ ತಿಂಗಳಲ್ಲಿ ಮುಂಬೈ ಪೊಲೀಸರು 12 ಗಂಟೆಗಳಿಗೂ ಹೆಚ್ಚು ಕಾಲ ವಿಚಾರಣೆಗೆ ಗುರಿ ಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News