ಉಡುಪಿ: ಜೂ.30ರವರೆಗೆ ಚರ್ಚ್‌ಗಳಲ್ಲಿ ಸಾಮೂಹಿಕ ಪೂಜೆ, ಪ್ರಾರ್ಥನೆ ನಡೆಸದಿರಲು ನಿರ್ಧಾರ

Update: 2020-06-09 10:34 GMT
ಸಾಂದರ್ಭಿಕ ಚಿತ್ರ 

ಉಡುಪಿ, ಜೂ.9: ಕೋವಿಡ್ -19 ಲಾಕ್‌ಡೌನ್ ಕಾರಣಕ್ಕಾಗಿ ಕಳೆದ 70 ದಿನಗಳಿಂದ ಮುಚ್ಚಿರುವ ಚರ್ಚ್‌ಗಳನ್ನು ತೆರೆದು, ನಿಯಮಾವಳಿಗಳಿಗೆ ಅನುಸಾರವಾಗಿ ಪೂಜೆ, ಇನ್ನಿತರ ಧಾರ್ಮಿಕ ಕಾರ್ಯಗಳನ್ನು ನಡೆಸಲು ರಾಜ್ಯ ಸರಕಾರ ಅನುಮತಿ ನೀಡಿದರೂ, ಭಕ್ತಾಧಿಗಳ ಆರೋಗ್ಯ ಹಾಗೂ ಸುರಕ್ಷತೆಗೆ ಗರಿಷ್ಠ ಆದ್ಯತೆಯನ್ನು ನೀಡುವ ಉದ್ದೇಶದಿಂದ ಉಡುಪಿ ಜಿಲ್ಲೆಯ ಯಾವುದೇ ಚರ್ಚ್‌ನಲ್ಲಿ ಜೂ.30ರವರೆಗೆ ಸಾಮೂಹಿಕ ಪೂಜೆ, ಪ್ರಾರ್ಥನೆಗಳು ನಡೆಸದಿರಲು ನಿರ್ಧರಿಸಲಾಗಿದೆ.

ಆದರೂ ಮುಂಜಾಗರೂಕತೆಯ ಕ್ರಮಗಳನ್ನು ಪಾಲಿಸುವ ಭಕ್ತಾಧಿಗಳಿಗೆ ವೈಯಕ್ತಿಕ ಭೇಟಿ ಹಾಗೂ ಪ್ರಾರ್ಥನೆಗಾಗಿ ಚರ್ಚ್‌ಗಳು ತೆರೆದಿರುತ್ತವೆ ಎಂದು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯದ ಪರವಾಗಿ ಉಡುಪಿ ಯುನೈಟೆಡ್ ಕ್ರಿಶ್ಚನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ತಿಳಿಸಿದೆ.

ಉಡುಪಿ ಕೆಥೊಲಿಕ್ ಧರ್ಮಾಧ್ಯಕ್ಷರ ನಿವಾಸದಲ್ಲಿ ಮಂಗಳವಾರ ನಡೆದ ಉಡುಪಿ ಕೆಥೊಲಿಕ್ ಧರ್ಮಪ್ರಾಂತ, ಚರ್ಚ್ ಆಫ್ ಸೌತ್ ಇಂಡಿಯ(ಸಿಎಸ್‌ಐ), ಯುನೈಟೆಡ್ ಬಾಸೆಲ್ ಮಿಷನ್ ಚರ್ಚಸ್(ಯುಬಿಎಂ), ಪುಲ್ ಗೊಸ್ಪೆಲ್ ಪಾಸ್ಟರ್ಸ್‌ ಅಸೋಸಿಯೇಶನ್ ಹಾಗೂ ಇತರ ಕ್ರೈಸ್ತ ಸಭೆಗಳ ಧಾರ್ಮಿಕ ಮುಖಂಡರ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು.

ಜೂ.30ರಂದು ಕೋವಿಡ್-19 ಸೋಂಕಿನ ಪರಿಸ್ಥಿತಿಯನ್ನು ಪರಿಶೀಲಿಸಿ, ಮುಂದಿನ ತೀರ್ಮಾನದ ಬಗ್ಗೆ ನಿರ್ಧರಿಸಲಾಗುವುದು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಕೊರೋನ ಸೋಂಕು ಇನ್ನೊಬ್ಬರಿಗೆ ತಗುಲದಂತೆ ಗರಿಷ್ಠ ಪ್ರಮಾಣದಲ್ಲಿ ಎಚ್ಚರಿಕೆ ವಹಿಸುವುದು, ನಾವು ಪರರಿಗೆ ತೋರಿಸುವ ಪ್ರೀತಿ ಹಾಗೂ ಕಾಳಜಿಯ ಗುರುತು ಎಂದು ಕ್ರೈಸ್ತ ಧಾರ್ಮಿಕ ಮುಖಂಡರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News