ಲಾಕ್‌ಡೌನ್ ಸಂದರ್ಭ ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡುವಲ್ಲಿ ಕ್ಯಾಂಪ್ಕೊ ಯಶಸ್ವಿ: ಸತೀಶ್ಚಂದ್ರ

Update: 2020-06-09 11:42 GMT

ಮಂಗಳೂರು, ಜೂ.9: ಕೊರೋನ ಲಾಕ್ ಡೌನ್ ಸಂದರ್ಭದಲ್ಲಿ ಕ್ಯಾಂಪ್ಕ್ಕೊ ಸಂಸ್ಥೆಯು ಬೆಳೆಗಾರರ ಮತ್ತು ನೌಕರರ ಹಿತರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ. ಸಂಸ್ಥೆಯ 2 ಸಾವಿರ ಉದ್ಯೋಗಿಗಳಿಗೆ ಲಾಕ್ ಡೌನ್ ಸಂದರ್ಭದಲ್ಲಿ ಯಾವುದೇ ಕಡಿತ ಮಾಡದೆ ವೇತನವನ್ನು ಕ್ಲಪ್ತ ಸಮಯದಲ್ಲಿ ಪಾವತಿಸಿದೆ. 8 ಸಾವಿರ ಕ್ವಿಂಟಾಲ್ ಅಡಿಕೆಯನ್ನು ಬೆಳೆಗಾರರಿಂದ ಖರೀದಿಸಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ತಿಳಿಸಿದ್ದಾರೆ.

ಅವರು ನಗರದ ಪ್ರತಿಕಾಭವನದಲ್ಲಿಂದು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದ ಗೋಷ್ಠಿಯನ್ನುದ್ದೇಶಿ ಮಾತನಾಡುತ್ತಿದ್ದರು.

ಕ್ಯಾಂಪ್ಕೋ ಎಪ್ರಿಲ್ 13ರಿಂದ ವಾರದಲ್ಲಿ ಒಂದು ದಿನ ಕೋಕೋ ಖರೀದಿ ಮತ್ತು ದಿನವೊಂದಕ್ಕೆ ಮೂವತ್ತು ಸದಸ್ಯರಿಂದ ಒಂದು ಕ್ವಿಂಟಾಲ್ ಅಡಿಕೆಯನ್ನು ಖರೀಸಿದೆ. ಬಳಿಕ ತಿಂಗಳಿಗೆ ಎರಡು ಕ್ವಿಂಟಾಲ್ ಹಾಗೂ ನಂತರ 5 ಕ್ವಿಂಟಾಲ್‌ವರೆಗೆ ಉತ್ತಮ ದರ ನೀಡಿ ಖರೀಸಿದೆ. ಕರ್ನಾಟಕ, ಕೇರಳದಲ್ಲೂ ಅಡಿಕೆ, ಕೋಕೋ ಖರೀದಿ ಮಾಡಲಾಗಿದೆ. ಮಳೆಗಾಲದಲ್ಲಿ ಅಡಿಕೆ ಬೆಳೆಗಾರರಿಗೆ ಕಾಡುವ ಕೊಳೆ ರೋಗದಂತಹ ರೋಗಗಳನ್ನು ತಡೆಯಲು ಸಿಂಪಡಿಸುವ ಔಷಧಿ ಗಾಗಿ ಉತ್ತಮ ಗುಣಮಟ್ಟದ ಮೈಲು ತುತ್ತವನ್ನು ಸಬ್ಸಿಡಿ ದರದಲ್ಲಿ ರೈತರಿಗೆ ನೀಡಿದೆ ಎಂದು ಸತೀಶ್ಚಂದ್ರ ಹೇಳಿದ್ದಾರೆ.

*ಆಮದು ಸ್ಥಗಿತ ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಗೆ ಕಾರಣ:
ಕ್ಯಾಂಪ್ಕೊದ ಆಡಳಿತ ನಿರ್ದೇಶಕ ಸುರೇಶ್ ಭಂಡಾರಿ ಮಾತನಾಡಿ, ಹೊರ ದೇಶಗಳಾದ ಬಾಂಗ್ಲಾ, ನೇಪಾಳಗಳಿಂದ ಅಡಿಕೆ ಆಮದು ನಿಂತಿರುವುದು ದೇಶೀಯ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಗೆ ಕಾರಣವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಉತ್ತರ ಭಾರತದ ಮಾರುಕಟ್ಟೆಯಲ್ಲಿ ಅಡಿಕೆ ಅಭಾವ ಕಂಡು ಬಂದು ದೇಶೀಯ ಅಡಿಕೆಗೆ ಒಮ್ಮೆಲೆ ಬೇಡಿಕೆ ಬಂದಿದೆ. ಈ ಸಂದರ್ಭದಲ್ಲಿ ಹೊಸ ಅಡಿಕೆ ಯನ್ನು ಬೆಳೆಗಾರರಿಂದ ಖರೀದಿಸಿ ಉತ್ತರ ಭಾರತದ ಮಾರುಕಟ್ಟೆಗೆ ಕ್ಯಾಂಪ್ಕೊ ವತಿಯಿಂದ ಸರಬರಾಜು ಮಾಡಲಾಯಿತು. ಇದು ಅಡಿಕೆ ಬೆಳೆಗೆ ಉತ್ತಮ ಧಾರಣೆ ದೊರೆಯಲು ಪ್ರಮುಖ ಕಾರಣವಾಗಿದೆ ಎಂದರು.

ಪ್ರಥಮ ಬಾರಿಗೆ ಹೊಸ ಅಡಿಕೆ ಪ್ರತಿ ಕಿಲೋವೊಂದಕ್ಕೆ 300 ರೂ.ಗೆ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ. ಇಂಡೋನೇಶ್ಯ, ಥಾಯ್‌ಲ್ಯಾಂಡ್, ಮಲೇಶ್ಯದ ಅಡಿಕೆಗಳು ನೇಪಾಳದ ಗಡಿಯ ಮೂಲಕ ಭಾರತದ ಮಾರುಕಟ್ಟೆ ಪ್ರವೇಶಿಸುತ್ತಿದ್ದ ಕಾರಣದಿಂದ ದೇಶೀಯ ಮಾರಕಟ್ಟೆಯಲ್ಲಿ ಅಡಿಕೆ ಬೆಲೆ ಏರಿಕೆಗೆ ತಡೆಯಾಗಿತ್ತು. ಲಾಕ್ ಡೌನ್ ಸಂದರ್ಭದಲ್ಲಿ ಈ ವ್ಯವಹಾರ ಸಂಪೂರ್ಣ ಸ್ಥಗಿತಗೊಂಡರೂ ಉತ್ತರ ಭಾರತದಲ್ಲಿ ಅಡಿಕೆಗೆ ಬೇಡಿಕೆ ಕಡಿಮೆಯಾಗಲಿಲ್ಲ. ಅಲ್ಲಿ ಅಡಿಕೆಯನ್ನು ಆಹಾರದ ವಸ್ತುವಾಗಿ ಬಳಕೆ ಮಾಡುತ್ತಿದ್ದ ಕಾರಣ ಬೇಡಿಕೆ ಹೆಚ್ಚಿದೆ ಎಂದು ತಿಳಿಸಿದರು.

ಮಹಾರಾಷ್ಟ್ರದಲ್ಲಿ ಕೊರೋನ ಕಾರಣದಿಂದ ಹೆಚ್ಚನ ಪ್ರಮಾಣದ ಅಡಿಕೆ ಮಾರಾಟವಾಗುತ್ತಿಲ್ಲ. ಆದರೆ ಗುಜರಾತ್‌ನ ಪರಿಸ್ಥಿತಿ ಭಿನ್ನವಾಗಿದೆ. ಅಲ್ಲಿ ಈಗಾಗಲೇ ಅಡಿಕೆಗೆ ಬೇಡಿಕೆ ಬರುತ್ತಿದೆ. ಈ ಕಾರಣದಿಂದ ಅಡಿಕೆ ಬೆಲೆ ಸದ್ಯ ಕುಸಿಯದು. ವಿದೇಶದ ಅಡಿಕೆ ಆಮದು ಸಂಪೂರ್ಣ ನಿಂತರೆ ದೇಶದ ಮಾರುಕಟ್ಟೆಯಲ್ಲಿ ಅಡಿಕೆಯ ಬೇಡಿಕೆಯ ಶೇ.40 ಕೊರತೆಯಾಗಲಿದೆ ಎಂದು ಸುರೇಶ್ ಭಂಡಾರಿ ತಿಳಿಸಿದ್ದಾರೆ.

*ಚಿಲ್ಲರೆ ಮಾರುಕಟ್ಟೆಗೂ ಕ್ಯಾಂಪ್ಕ್ಕೊ ಚಾಕಲೇಟ್ ಉತ್ಪನ್ನ

ಡೈರಿ ಮಿಲ್ಕ್ ಮಾದರಿಯ ಚಾಕಲೇಟ್, ಶುಗರ್ ಫ್ರೀ ಚಾಕಲೇಟ್ ಸೇರಿದಂತೆ ನಾಲ್ಕು ಉತ್ಪನ್ನಗಳ ಚಾಕಲೇಟ್‌ಗಳನ್ನು ಗ್ರಾಹಕರ ಬೇಡಿಕೆಯ ಹಿನ್ನೆಲೆಯಲ್ಲಿ ಕ್ಯಾಂಫ್ಕೋ ಚಿಲ್ಲರೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಎಂದು ಸುರೇಶ್ ಭಂಡಾರಿ ತಿಳಿಸಿದ್ದಾರೆ.

ಸಂವಾದದ ಅಧ್ಯಕ್ಷತೆಯನ್ನು ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವಹಿಸಿದ್ದರು.

ವೇದಿಕೆಯಲ್ಲಿ ಕ್ಯಾಂಪ್ಕೊ ಜಿಎಂ ರೇಶ್ಮಾ ಮಲ್ಯ ಉಪಸ್ಥಿತರಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಇಬ್ರಾಹೀಂ ಅಡ್ಕಸ್ಥಳ ವಂದಿಸಿದರು ಕಾರ್ಯಕಾರಿ ಸಮಿತಿ ಸದಸ್ಯ ಭಾಸ್ಕರ ರೈ ಕಟ್ಟಬೀಡು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News