ಕೊರೋನ ಸೋಂಕಿತರಿಗೆ ಆತ್ಮೀಯತೆಯೇ ಮುಖ್ಯ ಚಿಕಿತ್ಸೆ: ಯುವ ವೈದ್ಯೆ ಡಾ. ಮರಿಯಮ್ ಶಬೀಹಾ
ಕೊರೋನ ಯೋಧರಿಗೆ ನಮ್ಮ ಸಲಾಂ......
ಮಂಗಳೂರು, ಜೂ. 9: ‘‘ವೈದ್ಯಕೀಯ ಲೋಕದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ರೋಗಗಳಲ್ಲಿ ಒಂದು ಕೋವಿಡ್ 19. ಈ ಸೋಂಕಿನ ಬಗ್ಗೆ ಯಾವುದೇ ರೀತಿಯ ಭಯ ಅನಗತ್ಯ. ವೈದ್ಯರಾಗಿದ್ದುಕೊಂಡು ರೋಗಿಗಳ ಚಿಕಿತ್ಸೆಯೇ ನಮ್ಮ ಧರ್ಮ. ಅದರಲ್ಲೂ ಕೋವಿಡ್ ಸೋಂಕಿತರಿಗೆ ಮುಖ್ಯವಾಗಿ ಬೇಕಾಗಿರುವುದು ಆತ್ಮೀಯತೆ. ಧೈರ್ಯ ತುಂಬುವ ಮಾತುಗಳು’’ ಎನ್ನುತ್ತಾರೆ ಯುವ ವೈದ್ಯೆ ಡಾ. ಮರಿಯಮ್ ಶಬೀಹಾ.
ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ವೆನ್‌ಲಾಕ್‌ನಲ್ಲಿ ಕೋವಿಡ್ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವ ಈ ಯುವ ವೈದ್ಯೆ, ತಮ್ಮ ವೃತ್ತಿಯನ್ನು ಆರಂಭಿಸಿದ್ದೇ ಕೋವಿಡ್ ರೋಗಿಗಳ ಚಿಕಿತ್ಸೆಯೊಂದಿಗೆ.
ಎಂಬಿಬಿಎಸ್ ಪೂರ್ಣಗೊಳಿಸಿ ಇನ್ನೇನು ಸೇವೆಗೆ ಮುಂದಾಗಬೇಕು ಎನ್ನುವಷ್ಟರಲ್ಲಿ ಈ ಮಹಾಮಾರಿ ಕೋವಿಡ್ ಜಗತ್ತನ್ನು ತಲ್ಲಣಗೊಳಿಸಿತ್ತು. ನಗರದ ಯೆನೆಪೊಯ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಶಿಕ್ಷಣದ ಬಳಿಕ ಕೊಂಚ ದಿನಗಳ ಬಿಡುವಿನ ಬಳಿಕ ಸೇವೆಯ ಆದ್ಯತೆಯೊಂದಿಗೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಬೇಕೆಂದು ಬಯಸಿದ್ದವರು ಈ ಯುವ ವೈದ್ಯೆ. ಅಷ್ಟರಲ್ಲಿ ಜಗತ್ತಿನಲ್ಲಿ ಮಾತ್ರವಲ್ಲ ದ.ಕ. ಜಿಲ್ಲೆಯಲ್ಲೂ ಕೋವಿಡ್ ಸೋಂಕು ಭಾರೀ ಸುದ್ದಿ ಮಾಡಲಾರಂಭಿಸಿತ್ತು. ಅದಾಗಲೇ ದೃಢ ನಿರ್ಧಾರದೊಂದಿಗೆ ಕೋವಿಡ್ ವೈದ್ಯೆಯಾಗಿ ಸೇವೆ ಸಲ್ಲಿಸಲು ಮುಂದಾದ ಡಾ. ಶಬೀಹಾ ತನ್ನ ತಂದೆ ಮುಹಮ್ಮದ್ ಇಸ್ಮಾಯಿಲ್ ಅವರ ಪ್ರೋತ್ಸಾಹದೊಂದಿಗೆ ವೆನ್‌ಲಾಕ್ ಆಸ್ಪತ್ರೆಯ ನೇರ ಸಂದರ್ಶನಕ್ಕೆ ಹಾಜರಾಗಿ ಆಯ್ಕೆಯಾಗಿದ್ದರು. ಎಪ್ರಿಲ್ 15ರಿಂದ ಇದುವರೆಗೆ ವೆನ್‌ಲಾಕ್‌ನಲ್ಲಿ ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ಶಬೀಹಾಗೆ ತಮ್ಮ ವೈದ್ಯಕೀಯ ವೃತ್ತಿ ಕೋವಿಡ್ ಸೋಂಕಿತರ ಒಡನಾಟದೊಂದಿಗೆ ಆರಂಭವಾಗಿರುವ ಬಗ್ಗೆ ಯಾವುದೇ ಅಳುಕಿಲ್ಲ, ಭಯವಿಲ್ಲ, ಬದಲಾಗಿ ಹೆಮ್ಮೆಯನ್ನು ವ್ಯಕ್ತಪಡಿಸುತ್ತಾರೆ.
‘‘ಕೊರೋನ ಸಾಂಕ್ರಾಮಿಕ ರೋಗ ಅಷ್ಟೆ. ಆದರೆ ಈ ಸೋಂಕಿಗೆ ಒಳಗಾದವರು ಹೆಚ್ಚಿನವರು ಧಿಗ್ಭ್ರಮೆಗೊಳಗಾಗುತ್ತಾರೆ. ಕಾರಣ, ಆಸ್ಪತ್ರೆಯಲ್ಲಿ ಚಿಕಿತ್ಸೆಯ ಸಂದರ್ಭ ಅವರ ಮನೆಯವರು ಅವರ ಬಳಿ ಇರುವುದಿಲ್ಲ. ಹೆಚ್ಚಿನ ಸೋಂಕಿತರಲ್ಲಿ ಯಾವುದೇ ರೋಗ ಗುಣಲಕ್ಷಣಗಳೇ ಇರುವುದಿಲ್ಲ. ಹಾಗಾಗಿ ಆಸ್ಪತ್ರೆಯ ನಾಲ್ಕು ಗೋಡೆಗಳ ಮಧ್ಯೆ ಸುಮಾರು ಒಂದು ತಿಂಗಳ ಕಾಲ ಕಳೆಯಬೇಕಾದಾಗ ಮಾನಸಿಕವಾಗಿಯೂ ಅವರು ಧೈರ್ಯಗುಂದುತ್ತಾರೆ. ಆ ಸಂದರ್ಭ ವೈದ್ಯರಾಗಿ ನಮ್ಮ ಕರ್ತವ್ಯ ಅವರ ಜತೆ ಆತ್ಮೀಯಾಗಿ ಪ್ರೀತಿಯಿಂದ ಮಾತನಾಡಿಸುವುದು. ನಾವು ಪಿಪಿಇ ಕಿಟ್ ಹಾಕಿಕೊಂಡು ಅವರ ಆರೈಕೆ, ಚಿಕಿತ್ಸೆ ನೀಡಬೇಕಾಗಿರುವುದರಿಂದ ಅವರಿಗೆ ನಮ್ಮ ಮುಖ ಪರಿಚಯ ಇರುವುದಿಲ್ಲ. ಹಾಗಿದ್ದರೂ ನಮ್ಮ ಆತ್ಮೀಯ ಮಾತುಗಳು, ನಾವು ಅವರ ಜತೆ ವ್ಯವಹರಿಸುವ ರೀತಿಯಿಂದ ಅವರು ನಮ್ಮನ್ನು ಗುರುತು ಹಿಡಿಯುತ್ತಾರೆ. ನಾಳೆಯೂ ನೀವು ರೌಂಡ್ಸ್‌ಗೆ ಬರುತ್ತೀರಾ ? ಎಂದು ಪ್ರತಿಯಾಗಿ ಪ್ರೀತಿಯಿಂದ ಕೇಳುತ್ತಾರೆ. ಒಬ್ಬ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸುವ ನನಗೆ ರೋಗಿಯ ಜತೆಗಿನ ಈ ಬಾಂಧವ್ಯವೇ ಬಹು ಮುಖ್ಯ’’ ಎನ್ನುತ್ತಾರೆ ಡಾ. ಶಬೀಹಾ.
ಪುತ್ತೂರು ಪಡೀಲ್ ಪೇಪರ್ ಗೋಡೌನ್ ನಿವಾಸಿ ಮುಹಮ್ಮದ್ ಇಸ್ಮಾಯಿಲ್ ಹಾಗೂ ಝೈನಾಬಿ ದಂಪತಿಯ ಪುತ್ರಿಯಾಗಿರುವ ಡಾ. ಶಬೀಹಾ ಮುಂದೆ ತಮ್ಮ ಕರ್ತವ್ಯವನ್ನು ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನೀಡಬೇಕೆಂಬ ಗುರಿಯನ್ನು ಹೊಂದಿದ್ದಾರೆ.
‘‘ಆರಂಭದಲ್ಲಿ ಕೋವಿಡ್ ಸೋಂಕು, ಸೋಂಕಿತರ ಬಗ್ಗೆ ವೈದ್ಯೆಯಾಗಿ ನನಗೂ ಸಾಕಷ್ಟು ಕುತೂಹಲವಿತ್ತು. ಅವರ ಚಿಕಿತ್ಸೆ ಯಾವ ರೀತಿ, ಪಿಪಿಇ ಕಿಟ್ ಹಾಕಿಕೊಂಡು ಯಾವ ರೀತಿ ಕರ್ತವ್ಯ ನಿರ್ವಹಿಸುವುದು. ಆದರೆ ಸೋಂಕಿತರಲ್ಲಿ ಬಹುತೇಕರಿಗೆ ಯಾವುದೇ ರೀತಿಯ ಸೋಂಕಿನ ಗುಣಲಕ್ಷಣಗಳೇ ಇಲ್ಲ. ಸೋಂಕಿತರಿಗೆ ಕೌನ್ಸೆಲಿಂಗ್ ನಡೆಸಿ ಧೈರ್ಯ ತುಂಬಲಾಗುತ್ತದೆ. ಆರಂಭದಲ್ಲಿ ವೆನ್‌ಲಾಕ್‌ನಲ್ಲಿ ಸೋಂಕಿತರು ಅಥವಾ ಶಂಕಿತ ಸೋಂಕಿತರ ಸಂಖ್ಯೆ ಕಡಿಮೆಯಾಗಿತ್ತು. ಇದೀಗ ಸಂಖ್ಯೆ ಹೆಚ್ಚುತ್ತಿದ್ದು, ಫ್ರಂಟ್ ಲೈನ್‌ನಲ್ಲಿರುವ ಕೊರೋನ ಯೋಧರ ಮೇಲಿನ ಒತ್ತಡವೂ ಹೆಚ್ಚಾಗಿದೆ. ವಾರದಲ್ಲಿ ಆರು ದಿನ (ಒಂದು ದಿನ ರಜೆಗೆ ಅವಕಾಶವಿದೆ) ಕನಿಷ್ಠ ತಲಾ ಆರು ಗಂಟೆ ಕರ್ತವ್ಯ ನಿರ್ವಹಣೆ. ಹಾಗಿದ್ದರೂ ಕೊರೋನ ಸೋಂಕಿತರ ಚಿಕಿತ್ಸೆ ನನಗೆ ಸಿಕ್ಕ ಅಪರೂಪದ ಅವಕಾಶ’’ ಎಂದು ಡಾ. ಡಾ. ಮರಿಯಮ್ ಶಬೀಹಾ ಆತ್ಮವಿಶ್ವಾಸ ವ್ಯಕ್ತಪಡಿಸುತ್ತಾರೆ.
ನನ್ನ ತಂದೆಯೇ ನನ್ನ ಆದರ್ಶ ವ್ಯಕ್ತಿ
‘‘ನನ್ನ ತಂದೆಯೇ ನನ್ನ ಪಾಲಿನ ಆದರ್ಶ ವ್ಯಕ್ತಿ. ನಾನು ವೈದ್ಯೆಯಾಗಬೇಕೆಂಬ ಕನಸು ನನಗಿಂತಲೂ ಹೆಚ್ಚು ಹೊಂದಿದ್ದವರು ನನ್ನ ತಂದೆ. ಆರೋಗ್ಯ ಸೇವೆ ಅರ್ಹರಿಗೆ ಉಚಿತವಾಗಿ ಲಭಿಸಬೇಕೆಂಬ ಅವರ ಕನಸು ಬಾಲ್ಯದಲ್ಲಿಯೇ ನನ್ನಲ್ಲೂ ವೈದ್ಯೆಯಾಗಬೇಕೆಂಬ ಹಂಬಲವನ್ನು ದೃಢಗೊಳಿಸಿತ್ತು. ನಾನು ಯೆನೆಪೋಯದಲ್ಲಿ ಎಂಬಿಬಿಎಸ್ ಪೂರ್ಣಗೊಳಿಸಿದ ಬಳಿಕ ಕೆಲ ದಿನಗಳ ಕಾಲ ಮನೆಯಲ್ಲಿದ್ದೆ. ಆ ಸಂದರ್ಭ ವೆನ್‌ಲಾಕ್‌ನಲ್ಲಿ ಕೋವಿಡ್ ವೈದ್ಯೆಯಾಗಿ ಕರ್ತವ್ಯ ನಿರ್ವಹಿಸಲು ಸಂದರ್ಶನಕ್ಕೆ ಕರೆ ಬಂದಾಗ ನನ್ನ ಆಸಕ್ತಿಗೆ ಪ್ರೋತ್ಸಾಹ ನೀಡಿದ್ದೆ ನನ್ನ ತಂದೆ. ಕೋವಿಡ್ ಬಗ್ಗೆ ಭಯ ಹೊಂದಿದ್ದ ನನ್ನ ತಾಯಿಗೆ ನಾನು ಇಂಟರ್ ವ್ಯೂಗೆ ಹೋಗಿ, ಆಯ್ಕೆಯಾಗಿ ಕೆಲಸಕ್ಕೆ ಸೇರುವ ತನಕವೂ ನಾನು ಕೋವಿಡ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಬಗ್ಗೆ ತಿಳಿದಿರಲಿಲ್ಲ. ಬಳಿಕ ನಾನು ಅವರಿಗೆ ಹೇಳಿದ್ದು, ಆರಂಭದಲ್ಲಿ ಆತಂಕ ವ್ಯಕ್ತಪಡಿಸಿದ್ದರು. ಇದೀಗ ಅವರಿಗೂ ಮನವರಿಕೆಯಾಗಿದೆ. ಯಾವುದೇ ರೀತಿಯ ಕಾಯಿಲೆ, ಸೋಂಕು ಸಮಾಜವನ್ನು ಯಾವಾಗ ಬೇಕಾದರೂ ಬಾಧಿಸಬಹುದು. ಕಂಗೆಡಿಸಬಹುದು, ಧೃತಿಗೆಡಿಸಬಹುದು. ಇತರ ಸಂದರ್ಭಗಳಲ್ಲಿ ನಾನು ವೈದ್ಯೆಯಾಗಿ ಸೇವೆ ಸಲ್ಲಿಸುವುದಕ್ಕೂ ಇಂತಹ ವಿಷಮ ಪರಿಸ್ಥಿತಿಯಲ್ಲಿ ಸೇವೆ ಸಲ್ಲಿಸುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಅದಕ್ಕಾಗಿಯೇ ನಾನು ಕೋವಿಡ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸಲು ಮುಂದಾಗಿದ್ದು’’ ಎಂದು ಡಾ. ಮರಿಯಮ್ ಶಬೀಹಾ ಹೇಳುತ್ತಾರೆ.
ತಂದೆ ಮುಹಮ್ಮದ್ ಇಸ್ಮಾಯಿಲ್ ರೊಂದಿಗೆ ಡಾ. ಶಬೀಹಾ